ಜಿಲ್ಲೆ

ಉತ್ತಮ ಶಿಕ್ಷಣ ಪಡೆದು ಬದುಕು ಕಟ್ಟಿಕೊಳ್ಳಿ

ಕಿರಣ್ ಮಾದರಹಳ್ಳಿ

ಹನೂರು: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದರೆ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಓದಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಚಿತ್ರದುರ್ಗದ ಅಬಕಾರಿ ಉಪ ಆಯುಕ್ತ ಮಾದೇಶ್ ತಿಳಿಸಿದರು.

ತಾಲೂಕಿನ ಮಣಗಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾತ್ಮ ಜ್ಯೋತಿ ಬಾ ಫುಲೆ ಸಮಾಜಮುಖಿ ನೌಕರರ ಒಕ್ಕೂಟದ ವತಿಯಿಂದ ಶನಿವಾರ ಆಯೋಜಿಸಿದ್ದ ಛತ್ರಪತಿ ಸಾಹು ಮಹಾರಾಜ್ ಅವರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಈ ಭಾಗದಲ್ಲಿ ಹಿಂದೆ ಕಷ್ಟಗಳ ನಡುವೆಯೂ ಶಿಕ್ಷಣ ಪಡೆದು ಸರ್ಕಾರಿ ಉದ್ಯೋಗ ಪಡೆದಿದ್ದೇವೆ. ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಂಡಿದ್ದೇವೆ. ಆದರೆ ಇದೀಗ ಸರ್ಕಾರ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಹಲವು ಸವಲತ್ತುಗಳನ್ನು ಒದಗಿಸುತ್ತಿದೆ. ಇಂದಿಗ ಯುಗದಲ್ಲಿ ಉದ್ಯೋಗಾವಕಾಶಗಳು ವಿಪುಲವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಓದಿನ ಕಡೆ ಹೆಚ್ಚಿ ಒತ್ತು ನೀಡುವುದರ ಮೂಲಕ ಉದ್ಯೋಗ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಬೆಂಗಳೂರು ಜಿಎಸ್‌ಟಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಎಂ. ಶಿವಣ್ಣ, ಕೊಳ್ಳೇಗಾಲ ಕ್ಷೇತ್ರ ಸಮನ್ವಯಾಧಿಕಾರಿ ಡಿ. ಮಹದೇವಕುಮಾರ್ ಮಾತನಾಡಿದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ಮಣಗಳ್ಳಿ ಗ್ರಾಮದ ಚಿಕ್ಕಬಸವಯ್ಯ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಗ್ರಾಪಂ ಸದಸ್ಯ ಮಲ್ಲಿಕಾರ್ಜುನಸ್ವಾಮಿ, ಮುಖ್ಯಶಿಕ್ಷಕ ನಾಗರಾಜು, ಶಿಕ್ಷಕರಾದ ನಂಜುಂಡ, ಕೃಷ್ಣಮೂರ್ತಿ, ಪೊಲೀಸ್ ಪೇದೆ ಕುಮಾರ್, ಎನ್‌ಜಿಒ ನೌಕರ ಪ್ರಕಾಶ್ ಹಾಗೂ ಇನ್ನಿತರರು ಇದ್ದರು.