ಹನೂರು: ಕಾಂಗ್ರೆಸ್ ಪಕ್ಷದ ವತಿಯಿಂದ ಚಾಮರಾಜನಗರದಲ್ಲಿ ಬುಧವಾರ ಅಯೋಜಿಸಿದ್ಧ ಕೃತಜ್ಞತಾ ಸಮಾರಂಭಕ್ಕೆ ಹನೂರು ಭಾಗದಲ್ಲಿ ಸಂಚರಿಸುತ್ತಿದ್ದ ಬಹುತೇಕ ಖಾಸಗಿ ಬಸ್‌ಗಳು ತೆರಳಿದ್ದರಿಂದ ಸಾರ್ವಜನಿಕರು ಬಸ್‌ಗಾಗಿ ತೊಂದರೆ ಅನುಭವಿಸಿದರು.
ಸಂಸದ ಸುನೀಲ್ ಬೋಸ್ ಜಯ ಗಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದಲ್ಲಿ ಮತದಾರರಿಗೆ ಕೃತಜ್ಞತಾ ಸಭೆಯನ್ನು ಆಯೋಜಿಸಿದ್ದು, ಈ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಭಾಗವಹಿಸಲಿದ್ದರು. ಹಾಗಾಗಿ, ಹನೂರು ವಿಧಾನಸಭಾ ಕ್ಷೇತ್ರದಿಂದ ಸುಮಾರು 50ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಈ ಕಾರ್ಯಕ್ರಮಕ್ಕೆ ತೆರಳಿದ್ದವು.
ಈ ಭಾಗದ ಒಡೆಯರಪಾಳ್ಯ, ಲೊಕ್ಕನಹಳ್ಳಿ ಹೂಗ್ಯಂ, ಮಾರ್ಟಳ್ಳಿ, ರಾಮಾಪುರ, ಶಾಗ್ಯ, ಬಂಡಳ್ಳಿ ಇನ್ನಿತರ ಕಡೆಗಳಿಗೆ ಸರ್ಕಾರಿ ಬಸ್‌ಗಳಿಗಿಂತ ಖಾಸಗಿ ಬಸ್‌ಗಳ ಸಂಚಾರವೇ ಹೆಚ್ಚು. ಹಾಗಾಗಿ ಈ ಭಾಗದ ಜನರು ಖಾಸಗಿ ಬಸ್‌ಗಳನ್ನೇ ಹೆಚ್ಚು ನಂಬಿದ್ದರು. ಆದರೆ ಈ ಭಾಗದಲ್ಲಿ ನಿತ್ಯ ಸಂಚರಿಸುತ್ತಿದ್ದ ಬಹುತೇಕ ಖಾಸಗಿ ಬಸ್‌ಗಳು ಕಾರ್ಯಕ್ರಮಕ್ಕೆ ತೆರಳಿದ್ದರಿಂದ ಬಸ್‌ಗಾಗಿ ಗಂಟೆಗಟ್ಟಲೇ ಕಾಯುವಂತಾಯಿತು. ಈ ವೇಳೆ ಆಗಮಿಸಿದ್ದ ಸರ್ಕಾರಿ ಬಸ್‌ನಲ್ಲೇ ಜನರು ನೂಕುನುಗ್ಗಲಿನಲ್ಲಿ ತೆರಳಿ ನಿಂತುಕೊಂಡೇ ಊರುಗಳಿಗೆ ತೆರಳಿದರು. ಇದರಿಂದ ಸಾರ್ವಜನಿಕರು ಅದರಲ್ಲೂ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಹೆಚ್ಚಿನ ತೊಂದರೆ ಅನುಭವಿಸಿದರು.
ಗೂಡ್ಸ್ ಆಟೋದಲ್ಲಿ ಬಂದ ವಿದ್ಯಾರ್ಥಿಗಳು: ತಾಲೂಕಿನ ತೊಮಿಯಾರ್‌ಪಾಳ್ಯ, ನಂಜ ಒಡೆಯರದೊಡ್ಡಿ, ಭೈರನತ್ತ, ನಾಗನತ್ತ, ಅಣಗಳ್ಳಿ ದೊಡ್ಡಿ ಹಾಗೂ ಈ ಮಾರ್ಗದ ಇನ್ನಿತರ ಗ್ರಾಮಗಳ ವಿದ್ಯಾರ್ಥಿಗಳು ಹಾಗೂ ಕೆಲಸದ ನಿಮಿತ್ತ ಆಗಮಿಸುವ ಕೂಲಿ ಕಾರ್ಮಿಕರು ಗೂಡ್ಸ್ ವಾಹನದಲ್ಲಿ ಆಗಮಿಸಬೇಕಾಯಿತು. ಇನ್ನು ಇದರ ಪ್ರಯೋಜನ ಪಡೆದ ಆಟೋಗಳು ಬುಧವಾರ ಈ ಭಾಗದಲ್ಲಿ ಹೆಚ್ಚು ಸಂಚರಿಸಿದವು.