???????????????????????????????????? 
ಜಿಲ್ಲೆ

ಮಹನೀಯರ ಆದರ್ಶ ಪಾಲಿಸಿ

ಕಿರಣ್ ಮಾದರಹಳ್ಳಿ

ಹನೂರು: ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರು ನಿರ್ದಿಷ್ಟ ಗುರಿಯನ್ನು ಹೊಂದುವುದರ ಮೂಲಕ ಓದಿನ ಕಡೆ ಹೆಚ್ಚು ಗಮನಹರಿಸಿ ಸಾಧನೆ ಮಾಡಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ಸಲಹೆ ನೀಡಿದರು.

ಹನೂರಿನ ಜಿ.ವಿ.ಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ಧ ಸಾಂಸ್ಕೃತಿಕ, ಕ್ರೀಡೆ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಯುವ ಸಮೂಹ ದೇಶದ ಪ್ರಗತಿಯ ಪ್ರತೀಕ. ಹಾಗಾಗಿ ಯುವ ಜನತೆ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಆದ್ದರಿಂದ ವಿದ್ಯಾರ್ಥಿ ದಿಸೆಯಲ್ಲೇ ಮಹನೀಯರ ಆದರ್ಶವನ್ನು ಪಾಲಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನು ಹೊಂದಬೇಕು. ಜತೆಗೆ ಪಠ್ಯದ ಜತೆ ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಇತ್ತೀಚಿನ ದಿನಗಳಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ದಿಸೆಯಲ್ಲಿ ಸರ್ಕಾರ ಉದ್ಯೋಗ ನೀಡುವುದರ ಮೂಲಕ ಯುವ ಸಮೂಹಕ್ಕೆ ಶಕ್ತಿ ತುಂಬುವ ಕೆಲಸ ಆಗಬೇಕಿದ್ದು, ಉತ್ತೇಜನ ನೀಡಬೇಕಿದೆ ಎಂದರು.

ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೇವರಾಜು ಮಾತನಾಡಿ, ಸಾಮಾಜಿಕ ಪ್ರಜ್ಞೆಯೇ ಸಂಸ್ಕೃತಿ. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಮೊಬೈಲ್ ಬಳಕೆಗೆ ಜೋತು ಬಿದ್ದು ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸಬೇಕಾಗಿದೆ ಎಂದು ತಿಳಿಸಿದರು.

ಪಟ್ಟಣ ಪಂಚಾಯಿತಿ ಸದಸ್ಯ ಮಹೇಶ್, ಕಾಲೇಜಿನ ಪ್ರಾಂಶುಪಾಲ ಸಿ.ಶೈಲೇಶ್‌ಕುಮಾರ್, ಉಪನ್ಯಾಸಕರಾದ ಮುತ್ತು, ಮನೋಜ್, ಚಂದ್ರು, ವಾಣಿಶ್ರೀ, ಕೃಪಾ, ಉಮಾ, ವತ್ಸಲಾ, ಗ್ರಂಥಪಾಲಕ ಸುರೇಂದ್ರ ಹಾಗೂ ಇನ್ನಿತರರು ಇದ್ದರು.