ಜಿಲ್ಲೆ

ಬೀದಿ ನಾಯಿಗಳಿಂದ ಜಿಂಕೆ ರಕ್ಷಣೆ

ಕಿರಣ್ ಮಾದರಹಳ್ಳಿ

ಹನೂರು; ಪಟ್ಟಣದ ಸಮೀಪದ ಅಜ್ಜೀಪುರ ಗ್ರಾಮಕ್ಕೆ ತೆರಳುವ ರಸ್ತೆ ಬದಿಯಲ್ಲಿರುವ ಅರಕನಹಳ್ಳದಲ್ಲಿ ಮಂಗಳವಾರ ಸಾರ್ವಜನಿಕರು ಬೀದಿ ನಾಯಿಗಳ ದಾಳಿಗೆ ತುತ್ತಾಗಿದ್ದ ಜಿಂಕೆಯೊಂದನ್ನು ರಕ್ಷಿಸಿದ್ದಾರೆ.

ಬೆಳಗ್ಗೆ 7.30ರ ಸುಮಾರಿನಲ್ಲಿ ಸಮೀಪದ ಅರಣ್ಯ ಪ್ರದೇಶದಿಂದ ಜಿಂಕೆಯೊಂದು ನೀರು ಕುಡಿಯಲು ಅರಕನಹಳ್ಳಕ್ಕೆ ಬಂದಿತ್ತು. ಈ ವೇಳೆ ಬೀದಿ ನಾಯಿಗಳ ಹಿಂಡು ಜಿಂಕೆಯ ಮೇಲೆ ದಾಳಿ ನಡೆಸಲು ಮುಂದಾದವು. ಇದನ್ನು ಗಮನಿಸಿದ ಸಾರ್ವಜನಿಕರು ನಾಯಿಗಳನ್ನು ಓಡಿಸುವುದರ ಮೂಲಕ ಜಿಂಕೆಯನ್ನು ರಕ್ಷಿಸಿದರು. ಬಳಿಕ ಜಿಂಕೆ ಕಾಡಿನತ್ತ ಓಡಿತು.

ಒತ್ತಾಯ: ಅರಕನಹಳ್ಳಕ್ಕೆ ನೀರು ಕುಡಿಯಲು ಕಾಡುಪ್ರಾಣಿಗಳು ಆಗಮಿಸುತ್ತವೆ. ಈ ಹಿನ್ನೆಲೆಯಲ್ಲಿ ಬೀದಿ ನಾಯಿಗಳು ಜಿಂಕೆಯ ಮೇಲೆ ದಾಳಿ ನಡೆಸಲು ಮುಂದಾಗುತ್ತವೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಈ ಸ್ಥಳದಲ್ಲಿ ಸಿಬ್ಬಂದಿಯನ್ನು ನಿಯೋಜಿಸುವುದರ ಮೂಲಕ ಬೀದಿ ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕುವಂತೆ ವನ್ಯಪ್ರಿಯರು ಒತ್ತಾಯಿಸಿದ್ದಾರೆ.