ಹನೂರು ; ತಾಲೂಕಿನ ಉದ್ದನೂರು ಹಾಗೂ ಬೆಳತ್ತೂರು ಭಾಗದಲ್ಲಿ ಜನರ ನಿದ್ದೆಗೆಡಿಸಿರುವ ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹಾಗೂ ರೈತರು ಪಟ್ಟಣದ ಅರಣ್ಯ ಇಲಾಖೆಯ ಕಚೇರಿ ಮುಂಭಾಗ ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಪಟ್ಟಣದ ವಲಯ ಅರಣ್ಯಾಧಿಕಾರಿ ಕಚೇರಿಗೆ ನೂರಾರು ರೈತರೊಂದಿಗೆ ಆಗಮಿಸಿದ ಸಂಘದ ಪದಾಧಿಕಾರಿಗಳು, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಈ ಭಾಗದಲ್ಲಿ ಚಿರೆತೆಯೊಂದು ಹಸು ಹಾಗೂ ಕುರಿಗಳನ್ನು ಬಲಿ ಪಡೆಯುತ್ತಿದ್ದು, ರಾತ್ರಿ ವೇಳೆ ಇದರ ಹಾವಳಿ ಹೆಚ್ಚಾಗಿದೆ. ಇದರಿಂದ ರೈತರು ಜೀವ ಭಯದಿಂದ ದಿನ ದೂಡುತ್ತಿದ್ದಾರೆ. ಆದರೆ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷೃ ವಹಿಸಿರುವುದು ಎಷ್ಟರ ಮಟ್ಟಿಗೆ ಸರಿ? ಒಂದು ವೇಳೆ ಪ್ರಾಣ ಹಾನಿಯಾದರೆ ಡಿಎಫ್‌ಒ ಅವರೇ ನೇರ ಹೊಣೆಗಾರರಾಗಬೇಕಾಗುತ್ತದೆ. ಆದ್ದರಿಂದ ಈ ಕೂಡಲೇ ಕ್ರಮವಹಿಸಿ ಚಿರತೆಯನ್ನು ಸೆರೆ ಹಿಡಿದು ಬೇರೆಡೆಗೆ ಬಿಡಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇನ್ನು ಅರಣ್ಯದಂಚಿನ ರೈತರಿಂದ ಜಮೀನು ಖರೀದಿಸುವ ಉದ್ದೇಶದಿಂದ ಹಣ ಉಳ್ಳವರು ಅರಣ್ಯ ಇಲಾಖೆಯೊಂದಿಗೆ ಹುನ್ನಾರ ನಡೆಸುತ್ತಿದ್ದಾರೆ. ಹಾಗಾಗಿ ಇತರೆಡೆಯಿಂದ ಚಿರತೆಯನ್ನು ಈ ಭಾಗದ ಅರಣ್ಯ ಪ್ರದೇಶಕ್ಕೆ ತಂದು ಬಿಡಲಾಗುತ್ತಿದೆ. ಪರಿಣಾಮ ಚಿರತೆ ಹಾವಳಿ ಹೆಚ್ಚಾಗಲು ಕಾರಣವಾಗಿದೆ. ಜಿಲ್ಲೆಯಲ್ಲಿ 4 ಟೈಗರ್ ಪ್ರಾಜೆಕ್ಟ್ ಇದ್ದರೂ ಚಿರತೆ ಸೆರೆಗೆ ಮೈಸೂರಿನಿಂದ ಟಾಸ್ಕ್‌ಪೋರ್ಸ್ ತಂಡವನ್ನು ಕರೆ ತರುವುದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ಜಿಲ್ಲೆಯಲ್ಲಿಯೇ ಚಿರತೆ ಟಾಸ್ಕ್‌ಪೋಸ್ ತೆರೆಯುವಂತೆ ಅವರು ಒತ್ತಾಯಿಸಿದರು.
ಗ್ರಾಮ ಘಟಕ ಅಧ್ಯಕ್ಷ ಮಾದಪ್ಪ ಮಾತನಾಡಿ, ಹಾವಳಿ ನಡೆಸುತ್ತಿರುವ ಚಿರತೆ ಈ ಭಾಗದಲ್ಲಿ ಅಡ್ಡಾಡುತ್ತಿದೆ. ಚಿರತೆ ಸೆರೆ ಹಿಡಿಯವಂತೆ ಮನವಿ ಸಲ್ಲಿಸಿ 20 ದಿನ ಕಳೆದಿದೆ. ಆದರೂ ಕ್ರಮಕೈಗೊಳ್ಳದಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ನಾಗನತ್ತ ಹಾಗೂ ಭೈರನತ್ತ ಭಾಗದಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು, ಜನರನ್ನು ಭಯಭೀತಿಗೊಳಿಸುತ್ತಿದೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಭೈರನತ್ತ ಗ್ರಾಮದ ರಾಜು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆರ್‌ಎಫ್‌ಒ ಪ್ರವೀಣ್, ಈಗಾಗಲೇ ಚಿರತೆ ದಾಳಿಗೊಳಗಾಗಿ ಮೃತಪಟ್ಟ ಹಸು ಹಾಗೂ ಕುರಿಗಳಿಗೆ ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಚಿರತೆ ಸೆರೆ ಹಿಡಿಯಲು ರಾತ್ರಿ ವೇಳೆ ಗಸ್ತು ಹೆಚ್ಚಿಸಲಾಗಿದೆ. ಚಿರತೆ ಚಲನ ವಲನವನ್ನು ಗಮನಿಸಲು ಸಿಬ್ಬಂದಿ ನಿಯೋಜಿಸಲಾಗಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸಲಾಗಿದೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈ ಬಿಡಲಾಯಿತು. ಪ್ರತಿಭಟನೆಯಲ್ಲಿ ಸಂಘದ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ರೈತ ಮುಖಂಡರಾದ ಅಮಾಸೆಗೌಡ, ಮಾದಯ್ಯ, ಶ್ರೀನಿವಾಸ್, ಕುಮಾರ್, ಮರಿಸ್ವಾಮಿ ಹಾಗೂ ಇತರರು ಭಾಗವಹಿಸಿದ್ದರು.
ಸೆಸ್ಕ್ ಕಚೇರಿಗೆ ಭೇಟಿ: ಬಳಿಕ ಸೆಸ್ಕ್ ಕಚೇರಿಗೆ ತೆರಳಿದ ರೈತರು, ರಾತ್ರಿ ವೇಳೆ ಜಮೀನಿನ ತೋಟದ ಮನೆಗಳಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಇದರಿಂದ ರಾತ್ರಿ ವೇಳೆ ಕತ್ತಲೆಯಲ್ಲಿಯೇ ಕಳೆಯಬೇಕಿದ್ದು, ತುಂಬಾ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಸಮರ್ಪಕ ವಿದ್ಯುತ್ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಎಇ ರಂಗಸ್ವಾಮಿ ಪ್ರತಿಕ್ರಿಯಿಸಿ, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.