ಹನೂರು: ಓದಿನ ಕಡೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ಶಿಕ್ಷಣದಲ್ಲಿ ಸಾಧನೆ ಮಾಡಿ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಸಮಾಜ ಸೇವಕ ರಾಮಾಪುರ ಮಹದೇವ ಸಲಹೆ ನೀಡಿದರು.
ತಾಲೂಕಿನ ಬಂಡಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2023-24ನೇ ಸಾಲಿನ ಸಾಹಿತ್ಯ, ಎನ್‌ಎಸ್‌ಎಸ್ ಹಾಗೂ ವಿಜ್ಞಾನ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಭವಿಷ್ಯವನ್ನು ರೂಪಿಸುವ ಅಡಿಗಲ್ಲು. ಇದರಿಂದ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯ. ಹಾಗೆಯೇ ಸಾಧನೆಯ ಮೂಲಕ ಉನ್ನತ ಸ್ಥಾನಗಳನ್ನು ಪಡೆಯಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಪಠ್ಯದ ಕಡೆ ಗಮನ ನೀಡುವುದಕ್ಕಿಂತ ಮೊಬೈಲ್ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಮೊಬೈಲ್ ಧನಾತ್ಮಕ ಹಾಗೂ ಋಣಾತ್ಮಕ ಪ್ರಭಾವ ಬೀರುವಂತದ್ದಾಗಿದೆ. ಹಾಗಾಗಿ ಮೊಬೈಲ್ ಕಲಿಕೆಗೆ ಪೂರಕವಾಗಿರಬೇಕೇ ಹೊರತು ಬಳಕೆಯ ಗೀಳಾಗಬಾರದು ಎಂದು ತಿಳಿಸಿದರು.
ಇದೇ ವೇಳೆ ಕಾಲೇಜಿನ ಹಳೇ ವಿದ್ಯಾರ್ಥಿಗಳಾದ ಮಣಗಳ್ಳಿಯ ನವೀನ್ ಮತ್ತು ರೇಣುಕಾ ಪ್ರೊಜೆಕ್ಟರ್ ಖರೀದಿಸಲು 20 ಸಾವಿರ ರೂ.ಕೊಡುಗೆ ನೀಡುವುದಾಗಿ ತಿಳಿಸಿದರು. ಬಳಿಕ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮುತ್ತುರಾಜು, ಉಪನ್ಯಾಸಕರಾದ ನಾಗರಾಜು, ನಾಗಸುಂದರ, ರಾಜೇಶ್, ನರೇಂದ್ರನಾಥ್, ಬಸವರಾಜು, ಮಹದೇವಶೆಟ್ಟಿ, ಆನಂದ್ ಹಾಗೂ ಮಹೇಂದ್ರ ಇದ್ದರು.