ಹನೂರು: ತಾಲೂಕಿನ ಲೊಕ್ಕನಹಳ್ಳಿ ಭಾಗದಲ್ಲಿ ಸೋಮವಾರ ಜೋರು ಮಳೆ ಸುರಿದ ಪರಿಣಾಮ ಈ ಮಾರ್ಗದ ರಸ್ತೆಯ ಗುಂಡಿಯಲ್ಲಿ ನೀರು ನಿಂತು ಕೆರೆಯಂತಾಗಿದ್ದು, ವಾಹನ ಸವಾರರು ತೊಂದರೆ ಅನುಭವಿಸಿದರು.
ಸುಮಾರು ಒಂದು ಗಂಟೆ ಕಾಲ ಜೋರು ಮಳೆಯಾಯಿತು. ಇದರಿಂದ ಲೊಕ್ಕನಹಳ್ಳಿಗೆ ಸಂಪರ್ಕ ಕಲ್ಪಿಸುವ ದೊಡ್ಡ ಮಾಲಾಪುರ, ಕಂಡಯ್ಯನಪಾಳ್ಯ ಮಾರ್ಗದ ರಸ್ತೆ ಗುಂಡಿಗಳಲ್ಲಿ ನೀರು ನಿಲ್ಲುವಂತಾಯಿತು. ಇದರಿಂದಾಗಿ ವಾಹನ ಸವಾರರು ಅದರಲ್ಲೂ ಬೈಕ್ ಸವಾರರು ಹರಸಾಹಸ ಪಟ್ಟು ಸಂಚರಿಸಬೇಕಾಯಿತು.
ಈ ಮಾರ್ಗವು ಲೊಕ್ಕನಹಳ್ಳಿ ಮೂಲಕ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ಅಂತಾರಾಜ್ಯ ಹೆದ್ದಾರಿಯಾಗಿದೆ. ಹಾಗಾಗಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಈ ದೆಸೆಯಲ್ಲಿ 3 ವರ್ಷಗಳ ಹಿಂದೆ ಮಧುವನಹಳ್ಳಿಯಿಂದ ಚನ್ನಾಲಿಂಗನಹಳ್ಳಿಯವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಆದರೆ ಇಲ್ಲಿಂದ ಲೊಕ್ಕನಹಳ್ಳಿವರೆಗೆ ಅಭಿವೃದ್ಧಿಪಡಿಸಿಲ್ಲ. ಹಾಗಾಗಿ ಕಳೆದ 2 ವರ್ಷದಿಂದ ದೊಡ್ಡ ಮಾಲಾಪುರದಿಂದ ಕಂಡಯ್ಯನಪಾಳ್ಯದವರೆಗೆ ರಸ್ತೆಯ ಬಹುತೇಕ ಕಡೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಗುಂಡಿ ನಿರ್ಮಾಣವಾಗಿವೆ. ಪರಿಣಾಮ ಮಳೆ ಬಂದಾಗ ಗುಂಡಿಗಳಲ್ಲಿ ಹಲವು ದಿನಗಳವರೆಗೆ ನೀರು ನಿಲ್ಲಲಿದೆ.
ಇದರಿಂದ ವಾಹನ ಸವಾರರು ಸಂಚರಿಸಲು ತುಂಬ ತೊಂದರೆ ಅನುಭವಿಸುವಂತಾಗಿದೆ. ರಾತ್ರಿ ವೇಳೆಯಲ್ಲಿ ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ಸಹ ಜರುಗಿದೆ. ಈ ಗುಂಡಿಗಳು ಅಪಾಯಕ್ಕೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿದಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಇನ್ನಾದರೂ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ಅಭಿವೃದ್ಧಿ ಪಡಿಸುವುದರ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಲೊಕ್ಕನಹಳ್ಳಿಯ ಜಗದೀಶ್ ಒತ್ತಾಯಿಸಿದ್ದಾರೆ.