ಜಿಲ್ಲೆ

ಆರೋಗ್ಯ ಶಿಬಿರದ ಪ್ರಯೋಜನ ಪಡೆಯಿರಿ

ಕಿರಣ್ ಮಾದರಹಳ್ಳಿ

ಹನೂರು: ಕಾಡಂಚಿನ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಎಚ್.ಕೃಷ್ಣಸ್ವಾಮಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಮಲೆ ಮಹದೇಶ್ವರಬೆಟ್ಟದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿರುವುದು ನಿಜಕ್ಕೂ ಅರ್ಥಪೂರ್ಣ. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಕನ್ವೆನ್ಷನ್ ಹಾಲ್‌ನಲ್ಲಿ ಭಾನುವಾರ ಎಚ್.ಕೃಷ್ಣಸ್ವಾಮಿ ಮೊಮೋರಿಯಲ್ ಟ್ರಸ್ಟ್, ಸಾಲೂರು ಬೃಹನ್ಮಠ, ರೋಟರಿ ಮಿಡ್‌ಟೌನ್ ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಹಾಗೂ ಕಣ್ಣಿನ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಇಂದಿನ ಆಧುನಿಕ ಯುಗದಲ್ಲಿ ಆಹಾರದಲ್ಲಿ ಬದಲಾವಣೆ, ಜೀವನ ಶೈಲಿ, ಕಾರ್ಯದಲ್ಲಿ ಒತ್ತಡ, ಹವಾಮಾನ ವೈಪರೀತ್ಯ ಹಾಗೂ ಇನ್ನಿತರ ಕಾರಣಗಳಿಂದ ಮನುಷ್ಯ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾನೆ. ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಆದ್ದರಿಂದ ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯವಾಗಿದೆ. ಈ ದಿಸೆಯಲ್ಲಿ ಈಗಾಗಲೇ ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಜನರಿಗೆ ಸೇವೆ ಸಲ್ಲಿಸುತ್ತಾ ಬಂದಿರುವ ಎಚ್.ಕೃಷ್ಣಸ್ವಾಮಿ ಟ್ರಸ್ಟ್‌ನ ಪ್ರೇಮಲತಾ ಕೃಷ್ಣಸ್ವಾಮಿ ಹಾಗೂ ಇವರ ಪುತ್ರ ಡಿವೈಎಸ್‌ಪಿ ಮಹಾನಂದ ಅವರು ಕಾಡಂಚಿನ ಜನರ ಆರೋಗ್ಯದ ದೃಷ್ಟಿಯನ್ನು ಮನದಲ್ಲಿಟ್ಟುಕೊಂಡು ಶಿಬಿರವನ್ನು ಆಯೋಜಿಸಿರುವುದು ಮೆಚ್ಚುವ ಸಂಗತಿ. ಇವರಿಂದ ಇಂತಹ ಕಾರ್ಯಗಳು ಇನ್ನಷ್ಟು ಹೆಚ್ಚಾಗಲಿ ಎಂದು ಆಶಿಸಿದರು.

ಮ.ಬೆಟ್ಟದ ಆಸ್ಪತ್ರೆ ಮೇಲ್ದರ್ಜೇಗೆ
ಇತ್ತೀಚಿನ ವರ್ಷಗಳಲ್ಲಿ ಮ.ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆರಿಸಲು ಈಗಾಗಲೇ ಅಗತ್ಯ ಕ್ರಮವಹಿಸಲಾಗಿದೆ. ಜತೆಗೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮ.ಬೆಟ್ಟದ ತಪ್ಪಲಿನ ಕಾಡಂಚಿನ ಗ್ರಾಮಗಳಿಗೆ ಇನ್ನು ಮೂಲ ಸೌಕರ್ಯ ಮರೀಚಿಕೆಯಾಗಿದೆ. ಇದರಿಂದ ಇಲ್ಲಿನ ಜನರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ರಸ್ತೆ ಹಾಗೂ ವಿದ್ಯುತ್ ಸೌಕರ್ಯ ಒದಗಿಸುವ ಸಂಬಂಧ ಈಗಾಗಲೇ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ಸೌಕರ್ಯಗಳು ಸಿಗಲಿದೆ. ಈ ಬಗ್ಗೆ ಮುತುರ್ವಜಿ ವಹಿಸಲಾಗಿದೆ ಎಂದು ತಿಳಿಸಿದರು.
ಎಚ್.ಕೆ ಟ್ರಸ್ಟ್ ಅಧ್ಯಕ್ಷೆ ಪ್ರೇಮಲತಾ ಕೃಷ್ಣಸ್ವಾಮಿ ಮಾತನಾಡಿ, ಪುತ್ರ ಡಿವೈಎಸ್‌ಪಿ ಮಹಾನಂದ ಅವರು ಮತಗಟ್ಟೆ ಧ್ವಂಸ ಘಟನೆ ಸಂಬಂಧ ಇಂಡಿಗನತ್ತ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಗ್ರಾಮಸ್ಥರಿಗೆ ಧೈರ್ಯ ಹೇಳಿದ್ದರು. ಈ ವೇಳೆ ಕಾಡಂಚಿನ ಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಅದರಂತೆಯೇ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಶಾಸಕರ ಆರೋಗ್ಯ ತಪಾಸಣೆ:
ವೈದ್ಯರಾಗಿರುವ ಡಾ.ಪ್ರೀತನ್ ನಾಗಪ್ಪ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹನೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, 3ನೇ ಸ್ಥಾನ ಪಡೆದುಕೊಂಡಿದ್ದರು. ಇತ್ತ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಶಾಸಕರಾಗಿರುವ ಎಂ.ಆರ್.ಮಂಜುನಾಥ್ ಅವರನ್ನು ಪ್ರೀತನ್ ನಾಗಪ್ಪ ಅವರು ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಪಾಸಣೆ ನಡೆಸಿದರು. ಕಾರ್ಯಕ್ರಮದಲ್ಲಿ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಬೆಂಗಳೂರು ಡಿವೈಎಸ್‌ಪಿ ಮಹಾನಂದ, ರೋಟರಿ ಸಂಸ್ಥೆ ಅಧ್ಯಕ್ಷ ದಕ್ಷಿಣಮೂರ್ತಿ, ವೈದ್ಯ ಡಾ.ಪ್ರವೀಣ್‌ಕುಮಾರ್ ಇತರರಿದ್ದರು.