ಹನೂರು: ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವ ಸಂಬಂಧ ಸರ್ಕಾರ ಈಗಾಗಲೇ ಸೂಚನೆ ನೀಡಿ ಹಲವು ತಿಂಗಳುಗಳೇ ಕಳೆದಿದೆ. ಆದರೆ ಸ್ಥಳ ಅಂತಿಮವಾಗದ ಪರಿಣಾಮ ಈ ಕಾರ್ಯ ನನೆಗುದಿಗೆ ಬಿದ್ದಿದೆ. ಕ್ಯಾಂಟೀನ್ ತೆರೆಯುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿ ಬಂದಿದೆ.
ಸಿದ್ದರಾಮಯ್ಯ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಡವರು, ನಿರ್ಗತಿಕರು ಹಾಗೂ ಕೂಲಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ತಿಂಡಿ ಹಾಗೂ ಊಟವನ್ನು ಒದಗಿಸುವ ಉದ್ದೇಶದಿಂದ ಜಿಲ್ಲೆ ಹಾಗೂ ತಾಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಕ್ರಮ ಕೈಗೊಂಡಿದ್ದರು. ಅದರಂತೆಯೇ ಜಿಲ್ಲೆಯ ಚಾ.ನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಯಳಂದೂರಿನಲ್ಲಿ ಕ್ಯಾಂಟೀನ್ ತೆರೆದು ಜನರಿಗೆ ಅನುಕೂಲ ಕಲ್ಪಿಸಲಾಗಿತ್ತು. ಆದರೆ ಈ ವೇಳೆ ಹನೂರು ಕೊಳ್ಳೇಗಾಲ ತಾಲೂಕಿಗೆ ಒಳಪಟ್ಟಿದ್ದ ಹಿನ್ನೆಲೆಯಲ್ಲಿ ಕ್ಯಾಂಟೀನ್ ತೆರೆಯಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಕ್ಷೇತ್ರದ ಜನರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. 2023ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಇಂದಿರಾ ಕ್ಯಾಂಟೀನ್‌ಗಳ ಬಲವರ್ಧನೆಯ ಜತೆಗೆ ರಾಜ್ಯದಲ್ಲಿ 188 ಹೊಸ ಕ್ಯಾಂಟೀನ್‌ಗಳನ್ನು ತೆರೆಯಲು ಆಯಾ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದ್ದರು. ಇದರಲ್ಲಿ ಹೊಸದಾಗಿ ರಚನೆಯಾಗಿರುವ ಹನೂರು ತಾಲೂಕು ಸಹ ಒಂದು. ಆದರೆ ಈ ಕಾರ್ಯ ಇನ್ನು ಕಾರ್ಯಗತಗೊಂಡಿಲ್ಲ. ಈ ಬಗ್ಗೆ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕ್ಯಾಂಟೀನ್ ಅವಶ್ಯಕತೆ:
ಹನೂರು ತಾಲೂಕು ರಚನೆಯಾಗಿ 6 ವರ್ಷ ಕಳೆದಿದ್ದು, ಇಲ್ಲಿ ತಹಸೀಲ್ದಾರ್, ಪೊಲೀಸ್, ಕೃಷಿ, ತಾಲೂಕು ಪಂಚಾಯಿತಿ, ಪಶು ವೈದ್ಯಕೀಯ, ಉಪ ನೋಂದಣಿ ಕಚೇರಿ ಸೇರಿದಂತೆ ಇನ್ನು ಕೆಲವು ಕಚೇರಿಗಳಿವೆ. ಹಾಗಾಗಿ ಇಲ್ಲಿಗೆ ತಾಲೂಕು ಕೇಂದ್ರದಿಂದ ಸುಮಾರು 100 ಕಿ.ಮೀ. ಅಂತರವನ್ನು ಹೊಂದಿರುವ ಗೋಪಿನಾಥಂ ಹಾಗೂ ಹೆಚ್ಚು ದೂರವಿರುವ ಮ.ಬೆಟ್ಟ, ಜಲ್ಲಿಪಾಳ್ಯ, ಪೊನ್ನಾಚಿ, ಒಡೆಯರಪಾಳ್ಯ, ಅರ್ಧನಾರಿಪುರ ಹಾಗೂ ಇನ್ನಿತರ ಕಡೆಗಳಿಂದ ಬಡಕುಟುಂಬಕ್ಕೆ ಸೇರಿದ ಹೆಚ್ಚಿನ ಜನರು ಕೆಲಸ ಕಾರ್ಯಗಳ ನಿಮಿತ್ತ ನಿತ್ಯ ಪಟ್ಟಣಕ್ಕೆ ಆಗಮಿಸುತ್ತಾರೆ. ಜತೆಗೆ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಸಹ ಆಗಮಿಸುತ್ತಾರೆ. ಆದರೆ ಇಲ್ಲಿ ಇಂದಿರಾ ಕ್ಯಾಂಟೀನ್ ಇಲ್ಲದ ಪರಿಣಾಮ ಕೆಲವರು ಹೊಟ್ಟೆ ತುಂಬಿಸಿಕೊಳ್ಳಲು ಹೋಟೆಲ್‌ಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ. ಇನ್ನು ಕೆಲವರು ಹಸಿವಿನಿಂದಲೇ ಗ್ರಾಮಕ್ಕೆ ಹಿಂತಿರುಗಬೇಕಾದ ಸ್ಥಿತಿ ಇದೆ. ಹಾಗಾಗಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆಯಾದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಆದ್ದರಿಂದ ಕ್ಯಾಂಟೀನ್ ಅಗತ್ಯತೆ ಇದೆ.
ಸ್ಥಳ ಅಂತಿಮವಾಗಿಲ್ಲ:
ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವ ಸಂಬಂಧ ಸ್ಥಳ ಗುರುತಿಸಲು ಈಗಾಗಲೇ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಹಾಗೂ ಶಾಸಕ ಎಂ.ಆರ್.ಮಂಜುನಾಥ್ ಅವರು ಪಟ್ಟಣ ಪಂಚಾಯಿತಿಗೆ ಸೂಚನೆ ನೀಡಲಾಗಿದೆ. ಇಲ್ಲಿನ ಅಧಿಕಾರಿಗಳು ಪಟ್ಟಣದ ಅರಣ್ಯ ಇಲಾಖೆಯ ಸರ್ವೇ ನಂ.245ರಲ್ಲಿ ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಳವನ್ನು ಗುರುತಿಸಲಾಗಿದೆ. ಆದರೆ ಅಂತಿಮವಾಗದ ಪರಿಣಾಮ ಈ ಕಾರ್ಯ ನನೆಗುದಿಗೆ ಬಿದ್ದಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಿ ಸ್ಥಳವನ್ನು ಅಂತಿಮಗೊಳಿಸುವುದರ ಮೂಲಕ ಕಟ್ಟಡ ನಿರ್ಮಿಸಿ ಕ್ಯಾಂಟೀನ್ ತೆರೆದು ಅನುಕೂಲ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹನೂರು ತಾಲೂಕು ಕೇಂದ್ರವಾಗಿದ್ದು, ಇಲ್ಲಿಗೆ ಕೆಲಸ ಕಾರ್ಯಗಳ ನಿಮಿತ್ತ ಜನರು ಆಗಮಿಸುತ್ತಾರೆ. ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಕ್ಯಾಂಟೀನ್ ತೆರೆಯಲಾಗಿದೆ. ಆದರೆ ಹನೂರಿನಲ್ಲಿ ಇಂದಿರಾ ಕ್ಯಾಂಟೀನ್ ಇಲ್ಲ. ಇದರಿಂದ ಬಡ ಜನರು ತಿಂಡಿ, ಊಟಕ್ಕಾಗಿ ಹೊಟೇಲ್‌ಗಳಿಗೆ ಹೋಗಬೇಕಿದೆ. ಆದ್ದರಿಂದ ಹನೂರಿನಲ್ಲಿ ಇಂದಿರಾ ಕ್ಯಾಂಟೀನ್ ಅನ್ನು ಆದಷ್ಟು ಬೇಗ ತೆರೆಯಬೇಕು. ಇದರಿಂದ ಜನರಿಗೆ ಅನುಕೂಲವಾಗಲಿದೆ.ರಾಜು, ಭೈರನತ್ತ ಗ್ರಾಮ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವ ಸಂಬಂಧ ಈಗಾಗಲೇ ಅರಣ್ಯ ಇಲಾಖೆ ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸ್ಥಳ ಗುರುತಿಸಲಾಗಿದೆ. ಆದರೆ ಅಂತಿಮವಾಗಿಲ್ಲ. ಈ ಬಗ್ಗೆ ಶಾಸಕರ ಗಮನಕ್ಕೂ ತರಲಾಗಿದ್ದು, ಅಗತ್ಯ ಸಲಹೆ ನೀಡಿದ್ದಾರೆ.ಮಹೇಶ್‌ಕುಮಾರ್, ಮುಖ್ಯಾಧಿಕಾರಿ ಹನೂರು ಪಪಂ