oppo_2 
ಜಿಲ್ಲೆ

ಹಾಸ್ಟೆಲ್ ನಿರ್ಮಾಣಕ್ಕೆ ಜಾಗ ಪರಿಶೀಲನೆ

ಹನೂರು: ತಾಲೂಕು ಕೇಂದ್ರದಲ್ಲಿ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಿಸುವ ಸಂಬಂಧ ಶನಿವಾರ ಪಿಡಬ್ಲುೃಡಿ ಇಲಾಖೆಯ ಅಧಿಕಾರಿಗಳು ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.

ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 6 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಹಾಗೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತಾಲೂಕು ಕೇಂದ್ರದಲ್ಲಿ ಹಾಸ್ಟೆಲ್ ನಿರ್ಮಿಸುವಂತೆ ಶಾಸಕ ಎಂ.ಆರ್ ಮಂಜುನಾಥ್ ಅವರು ಸೂಚನೆ ನೀಡಿದ್ದು, ಸ್ಥಳ ಪರಿಶೀಲಿಸಿ ಮಾಹಿತಿ ನೀಡುವಂತೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪಿಡಬ್ಲುೃಡಿ ಇಲಾಖೆಯ ಇಇ ಮಹೇಶ್ ಹಾಗೂ ಎಇಇ ಚಿನ್ನಣ್ಣ ಅವರು ತಹಸೀಲ್ದಾರ್ ಕಚೇರಿ ಆವರಣಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿದರು. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದರು.

ಈ ಸಂಬಂಧ ಪರಿಶಿಷ್ಟ ವರ್ಗಗಳ ತಾಲೂಕು ಕಲ್ಯಾಣಾಧಿಕಾರಿ ನವೀನ್ ಮಠದ್ ಅವರು ವಿಜಯವಾಣಿಯೊಂದಿಗೆ ಮಾತನಾಡಿ, ಬಂಡಳ್ಳಿ ಗ್ರಾಮಕ್ಕೆ ವಿದ್ಯಾರ್ಥಿನಿಲಯ ಮಂಜೂರಾಗಿದೆ. ಆದರೆ ಇಲ್ಲಿ ಶಾಲೆ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಶಾಸಕರ ಸೂಚನೆಯಂತೆ ಹನೂರಿನಲ್ಲಿ ಹಾಸ್ಟೆಲ್ ನಿರ್ಮಿಸಲು ನಿರ್ಧರಿಸಲಾಗಿದೆ. ಇಲ್ಲಿ ಹಾಸ್ಟೆಲ್ ನಿರ್ಮಿಸುವುದರಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದರು.