ಹನೂರು: ತಾಲೂಕಿನ ಪ್ರಸಿದ್ಧ್ದ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆ ಮೂಲಕ ತೆರಳುವ ಭಕ್ತರಿಗೆ ದಾನಿಗಳು ಅನ್ನದಾನ, ಹಣ್ಣು, ನೀರು, ಮಜ್ಜಿಗೆ ಇತರ ಆಹಾರ ಪದಾರ್ಥಗಳನ್ನು ನೀಡುವುದು ಸಾಮಾನ್ಯ. ಆದರೆ ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಹಾಗೂ ಒಂಬುಡ್ಸ್‌ಮನ್ ಅವರು ಭಕ್ತರಿಗಾಗಿ ತಂಗುದಾಣವನ್ನೇ ನಿರ್ಮಿಸಿ ಮೂಲ ಸೌಕರ್ಯವನ್ನು ಒದಗಿಸಿದ್ದಾರೆ.
ತಾಲೂಕಿನ ಮಂಗಲ ಗ್ರಾಮದ, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಡಾ.ವಿ.ಸಾಂಬಾಜಿ ರಾವ್ ಅವರು ಭಕ್ತರ ಅನುಕೂಲಕ್ಕೆ ತಂಗುದಾಣ ನಿರ್ಮಿಸಿದ್ದಾರೆ. ಎಸ್ಸೆಸ್ಸೆಲ್ಸಿವರೆಗೆ ಹನೂರಿನಲ್ಲಿ ಶಿಕ್ಷಣ ಪಡೆದ ಇವರು, ಪಿಎಚ್.ಡಿವರೆಗೆ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 1996ರಲ್ಲಿ ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ 5 ವರ್ಷ, ಬೆಂಗಳೂರಿನ ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 7 ವರ್ಷ ಸೇವೆ ಸಲ್ಲಿಸಿದ್ದಾರೆ. ಬಳಿಕ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಸಹಾಯಕ ನಿರ್ದೇಶಕ, ವಿಶೇಷಾಧಿಕಾರಿ ಹಾಗೂ ಜಂಟಿ ನಿರ್ದೇಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಬೆಂಗಳೂರು ಡಾ.ಬಿ.ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎನ್ವೈರ್ನಮೆಂಟ್ ಯೂನಿರ್ವಸಿಟಿಯಲ್ಲಿ ಸಿಂಡಿಕೇಟ್ ಸದಸ್ಯರಾಗಿದ್ದಾರೆ. ಪ್ರಸ್ತುತ ತುಮಕೂರು ಜಿಲ್ಲಾ ಪಂಚಾಯಿತಿಯಲ್ಲಿ ನರೇಗಾ ಯೋಜನೆಯ ಒಂಬುಡ್ಸ್‌ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮಾದಪ್ಪನ ಕೃಪೆಗೆ ಕಾಲ್ನಡಿಯಲ್ಲಿ ಆಗಮಿಸುವ ಭಕ್ತರು ವಿಶ್ರಾಂತಿ ಪಡೆಯಲು ತಂಗುದಾಣ ನಿರ್ಮಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ತಂಗುದಾಣ ನಿರ್ಮಿಸಲು ಕಾರಣವೇನು?:
ಬೆಂಗಳೂರಿನಲ್ಲಿ ನೆಲೆಸಿರುವ ಅವರು ಸ್ವಗ್ರಾಮ ಮಂಗಲಕ್ಕೆ ಆಗಾಗ್ಗೆ ಬಂದು ಹೋಗುತ್ತಿದ್ದರು. ಈ ವೇಳೆ ಚಾ.ನಗರ ಸೇರಿದಂತೆ ಬೆಂಗಳೂರು, ಕನಕಪುರ, ರಾಮನಗರ, ಚನ್ನಪಟ್ಟಣ, ಮಂಡ್ಯ ಇತರ ಕಡೆಗಳಿಂದ ಸಾವಿರಾರು ಮಾದಪ್ಪನ ಭಕ್ತರು ಬಿಸಿಲು, ಮಳೆ ಎನ್ನದೆ ಕಾಲ್ನಡಿಗೆಯ ಮೂಲಕ ತೆರಳುತ್ತಾರೆ. ಈ ವೇಳೆ ಮರದ ನೆರಳು ಹಾಗೂ ಮಾರ್ಗದ ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ತೊಂದರೆ ಅನುಭವಿಸುತ್ತಿದ್ದು ಗಮನಕ್ಕೆ ಬಂದಿದೆ. ಇದರಿಂದ ಕಾಲ್ನಡಿಗೆಯ ಭಕ್ತರಿಗೆ ಅನುಕೂಲ ಕಲ್ಪಿಸಬೇಕು ಎಂದು ನಿರ್ಧರಿಸಿದರು. ಉಪನ್ಯಾಸಕಿಯಾದ ಪತ್ನಿ ಡಾ.ಮಾಲಿನಿ ಅವರ ಸಲಹೆ ಮೇರೆಗೆ ಹಾಗೂ ಗ್ರಾಮಸ್ಥರ ಸಹಕಾರ ಪಡೆದು ತಂಗುದಾಣ ನಿರ್ಮಿಸಲು ತೀರ್ಮಾನಿಸಿದರು. ಬಳಿಕ ಜಮೀನಿನಲ್ಲಿಯೇ ಪ್ರತ್ಯೇಕ ಜಾಗವನ್ನು ಕಾಯ್ದಿರಿಸಿ ಲಕ್ಷಾಂತರ ರೂ. ವ್ಯಯಿಸಿ ತಂಗುದಾಣ ನಿರ್ಮಿಸುವ ಮೂಲಕ ಮಾದಪ್ಪನ ಭಕ್ತರಿಗೆ ಅನುಕೂಲ ಕಲ್ಪಿಸಿದ್ದಾರೆ.
ಭಕ್ತರು ತೆರಳುವ ಮಂಗಲ-ಹನೂರು ಮಾರ್ಗದ ಮುಖ್ಯ ರಸ್ತೆ ಬದಿಯಲ್ಲಿರುವ ಜಮೀನಿನಲ್ಲಿ ಒಟ್ಟಿಗೆ 100 ಜನರು ತಂಗಬಹುದಾದ ವಿಶ್ರಾಂತಿ ತಾಣ ನಿರ್ಮಿಸಲಾಗಿದ್ದು, ಶೌಚಗೃಹ, ಸ್ನಾನದ ಮನೆ, ಬಟ್ಟೆ ಬದಲಾಯಿಸಿಕೊಳ್ಳಲು ಪ್ರತ್ಯೇಕ ಕೊಠಡಿ, ಮಲಗಲು ಸ್ಥಳಾವಕಾಶ ಕಲ್ಪಿಸಿಕೊಟ್ಟಿದ್ದಾರೆ. ಚಾಪೆ, ಕುರ್ಚಿ ಹಾಗೂ ಇತರ ಸಾಮಗ್ರಿಗಳನ್ನು ಒದಗಿಸಿದ್ದಾರೆ. ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ವಿದ್ಯುತ್, ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.
ದಾಸೋಹದ ಬಗ್ಗೆಯೂ ಒಲವು:
ತಂಗುದಾಣದಲ್ಲಿ ಈಗಾಗಲೇ ಭಕ್ತರು ತಂಗಲು ಆರಂಭಿಸಿದ್ದು, ಈ ಭಾಗದಲ್ಲಿ ಇಂತಹ ಸೌಕರ್ಯ ಎಲ್ಲಿಯೂ ಸಿಗದಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿದ್ದಾರೆ. ಜತೆಗೆ ಅನ್ನದಾನ ಆರಂಭಿಸಿದರೆ ಭಕ್ತರಿಗೆ ಇನ್ನಷ್ಟು ಅನುಕೂಲವಾಗಲಿದೆ ಎಂಬ ಸಲಹೆಯನ್ನು ನೀಡಿದ್ದಾರೆ. ಸಲಹೆ ಸ್ವೀಕರಿಸಿರುವ ಸಾಂಬಾಜಿ ರಾವ್ ಭಕ್ತರಿಗೆ ಈಗಾಗಲೇ ಹಣ್ಣು ವಿತರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅನ್ನ ದಾಸೋಹದ ಬಗ್ಗೆಯೂ ನಿರ್ಧರಿಸಿದ್ದಾರೆ. ಜತೆಗೆ ಇಲ್ಲಿ ಇನ್ನೂ 100 ಜನರು ತಂಗಲು ಸೌಲಭ್ಯ ಕಲ್ಪಿಸುವ ಗುರಿ ಹೊಂದಿದ್ದಾರೆ.
ನೀರಿನ ತೊಟ್ಟಿ ನಿರ್ಮಾಣ:
ಜಮೀನಿನಲ್ಲಿ ಇದೀಗ ಬೋರ್‌ವೆಲ್ ಕೊರೆಯಿಸಿದ್ದು, ಉತ್ತಮ ನೀರು ಬಂದಿದೆ. ಹಾಗಾಗಿ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಭಕ್ತರ ಅನುಕೂಲಕ್ಕಾಗಿ ತಂಗುದಾಣ ನಿರ್ಮಿಸಿರುವುದು ಒಂದೆಡೆಯಾದರೆ ಜಾನುವಾರುಗಳಿಗೆ ನೀರಿನ ತೊಟ್ಟಿ ನಿರ್ಮಿಸುವುದರ ಮೂಲಕ ಸಾಂಬಾಜಿ ರಾವ್ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ.
ಕಾಲ್ನಡಿಗೆಯಲ್ಲಿ ಮ.ಬೆಟ್ಟಕ್ಕೆ ಆಗಮಿಸುತ್ತಿದ್ದ ಭಕ್ತರು ಮೂಲಸೌಕರ್ಯಕ್ಕಾಗಿ ತೊಂದರೆ ಅನುಭವಿಸುತ್ತಿದ್ದನ್ನು ಕಣ್ಣಾರೆ ಕಂಡಿದ್ದೆ. ಹಾಗಾಗಿ, ಗ್ರಾಮಸ್ಥರ ಸಹಕಾರ ಪಡೆದು ತಂಗುದಾಣ ನಿರ್ಮಿಸಲಾಗಿದೆ. ಭಕ್ತರು ಹಾಗೂ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದು ನನಗೆ ತೃಪ್ತಿ ತಂದುಕೊಟ್ಟಿದೆ.ಡಾ.ವಿ.ಸಾಂಬಾಜಿ ರಾವ್, ನಿವೃತ್ತ ಜಂಟಿ ನಿರ್ದೇಶಕ, ಮಂಗಲ ಗ್ರಾಮ