ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಾಳುಬೆಟ್ಟದಲ್ಲಿ ಒಂದೇ ಕುಟುಂಬದ ನಾಲ್ವರು ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಇದರಿಂದ ಒಬ್ಬರು ಮೃತಪಟ್ಟರೆ ಮೂವರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಚಂದಗಾಲ ಗ್ರಾಮದ ಮಹದೇವನಾಯಕ (65) ಮೃತರು. ಇವರ ಪತ್ನಿ ಗೌರಮ್ಮ (53), ಪುತ್ರಿ ಲೀಲಾವತಿ (34) ಹಾಗೂ ಮೊಮ್ಮಗಳು (17) ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಾಲ್ವರು ಶುಕ್ರವಾರ ಬೆಳಗ್ಗೆ ಕೆ.ಆರ್.ನಗರದಿಂದ ಮಲೆ ಮಹೇಶ್ವರ ಬೆಟ್ಟದ ಕಡೆಗೆ ಬಂದಿದ್ದಾರೆ. ತಾಳುಬೆಟ್ಟದಲ್ಲಿ ಇಳಿದು ಮೊದಲ ತಿರುವಿನ ಅರಣ್ಯ ಪ್ರದೇಶದಲ್ಲಿ ರಾತ್ರಿಯೇ ಕ್ರಿಮಿನಾಶಕ ಸೇವಿಸಿ ಇಲ್ಲೇ ಉಳಿದಿದ್ದಾರೆ. ಬೆಳಗ್ಗೆ ವೇಳೆಗೆ ಮಹದೇವನಾಯಕ ಮೃತಪಟ್ಟಿದ್ದನ್ನು ನೋಡಿ ಹೆದರಿದ ಬಾಲಕಿ ಅರಣ್ಯದೊಳಗಿನಿಂದ ನರಳಾಡುತ್ತಾ ರಸ್ತೆಯಲ್ಲಿದ್ದ ಭಕ್ತರನ್ನು ಕೂಗಿ ಕರೆದಿದ್ದಾಳೆ.
ಸ್ಥಳೀಯರು ಗೌರಮ್ಮ, ಲೀಲಾವತಿ ಮತ್ತು ಬಾಲಕಿ ಸ್ಥಿತಿ ನೋಡಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಗೌರಮ್ಮ, ಲೀಲಾವತಿಯನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಲೀಲಾವತಿ ಸ್ಥಿತಿ ಚಿಂತಾಜನಕವಾಗಿದೆ. ಹನೂರಿನ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಿದ್ದ ಬಾಲಕಿಯನ್ನೂ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಗೆ ಕಾರಣವೇನು?
ಕೆ.ಆರ್.ನಗರದ ಚೀರನಹಳ್ಳಿಯ ಲೋಕೇಶ್ ಅಪ್ರಾಪ್ತೆಯನ್ನು ಪ್ರೀತಿಸಿದ್ದ. ಈಕೆಯೊಂದಿಗಿದ್ದ ಖಾಸಗಿ ವಿಡಿಯೋ, ಆಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪ್ರಕರಣ ದಾಖಲಿಸಿಕೊಳ್ಳಲಿಲ್ಲ. ಮಾನಕ್ಕೆ ಅಂಜಿದ ಕುಟುಂಬ ವಿಷ ಸೇವಿಸಿದೆ ಎಂದು ಇವರ ಸಂಬಂಧಿಕ ಚೆಲುವರಾಜು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಕೆ.ಆರ್ ನಗರದ ಕಾಲೇಜಿಗೆ ಹೋಗುತ್ತಿದ್ದ ಬಾಲಕಿಯನ್ನು ಚೀರನಹಳ್ಳಿ ಗ್ರಾಮದ ಲೋಕೇಶ್ ಪ್ರೀತಿಸುವುದಾಗಿ ಪುಸಲಾಯಿಸಿದ್ದ. ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಬಳಿಕ ಈಕೆಯನ್ನು ಚುಂಚನಕಟ್ಟೆಗೆ ಕರೆದೊಯ್ದು ಖಾಸಗಿ ಕ್ಷಣಗಳನ್ನು ಚಿತ್ರೀಕರಿಸಿದ್ದ. ಕೆಲವು ದಿನಗಳ ಬಳಿಕ ‘ನಾನು ಕರೆದಾಗ ಬರಲಿಲ್ಲವಾದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತೇನೆ’ ಎಂದು ಬೆದರಿಸಿದ್ದ ಎಂದು ಹೇಳಿದ್ದಾರೆ.
ಲೋಕೇಶ್ ಮೊಬೈಲ್ ಅನ್ನು ಬಾಲಕಿ ಹೊಡೆದು ಹಾಕಿದ್ದಳು. ಕೆಲವು ದಿನಗಳ ನಂತರ ಲೋಕೇಶ್ ಮನೆಯಲ್ಲಿ ಯಾರು ಇಲ್ಲದ ವೇಳೆ ಚಂದಗಾಲು ಗ್ರಾಮಕ್ಕೆ ಬಂದು ಬಾಲಕಿ ಜತೆಗೆ ಗಲಾಟೆ ಮಾಡಿದ್ದ. ಸ್ಥಳೀಯರು ಬುದ್ಧಿ ಹೇಳಿ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಮಹದೇವ ನಾಯಕ ಕೆ.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದಾಗ ಪೊಲೀಸರು ಲೋಕೇಶ್‌ಗೆ ಬುದ್ಧಿವಾದ ಹೇಳುವುದಾಗಿ ತಿಳಿಸಿ ದೂರನ್ನು ತಿರಸ್ಕರಿಸಿದ್ದರು. ಇದರಿಂದ ಬೇಸತ್ತ ಮಹದೇವನಾಯಕ ಕುಟುಂಬಸ್ಥರು ಮಾನಕ್ಕೆ ಅಂಜಿ ವಿಷ ಸೇವಿಸಿದ್ದಾರೆ ಎಂದರು.
ಲೋಕೇಶ್ ಮತ್ತು ಪೊಲೀಸರ ವಿರುದ್ಧ ದೂರು:
ಈ ಪ್ರಕರಣದ ಸಂಬಂಧ ಮೃತ ಮಹದೇವನಾಯಕ ಸಂಬಂಧಿಕ ಮಂಜು ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಚೀರನಹಳ್ಳಿಯ ಲೋಕೇಶ್ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೆ ಈ ಸಂಬಂಧ ದೂರು ನೀಡಲು ಹೋದಾಗ ಕೆ.ಆರ್.ನಗರದ ಪೊಲೀಸರು ದೂರು ಸ್ವೀಕರಿಸಿಲ್ಲ ಎಂದು ಮಂಜು ದೂರಿದ್ದಾರೆ.
ಒಂದೇ ಕುಟುಂಬದ ನಾಲ್ವರು ತಾಳುಬೆಟ್ಟದಲ್ಲಿ ವಿಷ ಕುಡಿದ ವಿಷಯ ತಿಳಿದ ಡಿವೈಎಸ್‌ಪಿ ಧರ್ಮೇಂದ್ರ ಹಾಗೂ ಇನ್ಸ್‌ಪೆಕ್ಟರ್‌ಗಳಾದ ಮ.ಬೆಟ್ಟದ ಜಗದೀಶ್, ಹನೂರಿನ ಶಶಿಕುಮಾರ್ ಹನೂರು ಆಸ್ಪತ್ರೆಗೆ ಭೇಟಿ ನೀಡಿ ಹೇಳಿಕೆ ಪಡೆದರು. ಮಹದೇವನಾಯ್ಕ ಮೃತದೇಹದ ಶವ ಪರೀಕ್ಷೆಗಾಗಿ ಹನೂರು ಸರ್ಕಾರಿ ಆಸ್ಪತ್ರೆಯಿಂದ ಚಾಮರಾಜನಗರ ಆಸ್ಪತ್ರೆಗೆ ರವಾನಿಸಲಾಯಿತು.
ಲೋಕೇಶ್ ಸಿಎಂ ಸಂಬಂಧಿಕ:
ಖಾಸಗಿ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದ ಲೋಕೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿ ಎನ್ನುವ ಕಾರಣಕ್ಕೆ ಪೊಲೀಸರು ಆತನನ್ನು ಬಂಧಿಸಿಲ್ಲ ಎಂದು ಕೆ.ಆರ್.ನಗರ ಮಾಜಿ ಶಾಸಕ ಸಾ.ರಾ.ಮಹೇಶ್ ಆರೋಪಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಪೊಲೀಸರು ಅರೆಸ್ಟ್ ಮಾಡದೆ ಬಿಟ್ಟಿರುವ ಆರೋಪಿಯಿಂದ ಈ ಕುಟುಂಬಕ್ಕೆ ಅನ್ಯಾಯವಾಗಿದೆ. ಯಾವ ಕಾರಣಕ್ಕೆ ಆತನ ವಿರುದ್ಧ ಎ್ಐಆರ್ ದಾಖಲಿಸಿಲ್ಲ ಎಂದು ಹೇಳಬೇಕು. ವಿಷ ಸೇವಿಸಿರುವ ಕುಟುಂಬಕ್ಕೆ ಪರಿಹಾರ, ನ್ಯಾಯ ಒದಗಿಸಿಕೊಡಬೇಕು. ದೂರು ತೆಗೆದುಕೊಳ್ಳದ ಪೊಲೀಸ್ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಾವು ಪೊಲೀಸ್ ಠಾಣೆ ಮುಂದೆ ಶವ ಇಟ್ಟು ಪ್ರತಿಭಟನೆ ಮಾಡುತ್ತೇವೆ. ವಿಷ ಕುಡಿದಿರುವ ನಾಲ್ವರಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಉಳಿದ ಮೂವರಲ್ಲಿ ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲೇ ನಾವೆಲ್ಲರೂ ತಲೆ ತಗ್ಗಿಸುವಂತಹ ಅಮಾನವೀಯ ಘಟನೆ ನಡೆದಿದೆ. ಪರಿಶಿಷ್ಟ ಪಂಗಡದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದು ಅದೇ ಸಮಾಜದ ಕುಟುಂಬಕ್ಕೆ ರಕ್ಷಣೆ ಕೊಡದೆ ಇಡೀ ಕುಟುಂಬದ ನಾಲ್ಕು ಜನ ಸದಸ್ಯರು ವಿಷ ಕುಡಿದಿದ್ದಾರೆ. ಬದುಕಿ ಬಾಳಬೇಕಿದ್ದ ಹೆಣ್ಣು ಮಗಳು ವಿಷ ಸೇವಿಸಿರುವುದು ನಾವೆಲ್ಲರೂ ತಲೆ ತಗ್ಗಿಸುವಂತಹ ಕೆಲಸ ಎಂದಿದ್ದಾರೆ.
ಮದುವೆಯಾಗಿದ್ದ ಲೋಕೇಶ್?
ಬಾಲಕಿಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಲೋಕೇಶ್‌ಗೆ ಈಗಾಗಲೇ ಮದುವೆಯಾಗಿದ್ದ, ಮಗು ಇದೆ. ಆದರೆ ಹೆಂಡತಿ ಬಿಟ್ಟು ಹೋಗಿದ್ದಾಳೆ ಎನ್ನಲಾಗಿದೆ. ಈತ ಆಟೋ ಓಡಿಸುತ್ತಿದ್ದ. ಬಾಲಕಿಯೊಂದಿಗೆ ಸಲುಗೆ ಬೆಳೆಸಿಕೊಂಡು, ಪ್ರೀತಿಸುತ್ತಿದ್ದ. ಇಬ್ಬರ ನಡುವೆ ಬಿರುಕು ಮೂಡಿದಾಗ ಬಾಲಕಿ ಮನೆ ಬಳಿಗೆ ಬಂದು ಗಲಾಟೆ ಮಾಡಿದಾಗ ಊರಿನವರಿಗೆಲ್ಲಾ ವಿಷಯ ಗೊತ್ತಾಗಿದ್ದರಿಂದ ಮಹದೇವನಾಯಕ ಮಾನಕ್ಕೆ ಅಂಜಿದರು ಎಂದು ಸಂಬಂಧಿಕ ಸತ್ಯ ಮಾಹಿತಿ ನೀಡಿದ್ದಾರೆ.
ಮಗ ಮನೆಯಲ್ಲಿದ್ದಾನೆ:
ತಾಯಿ ಲೀಲಾವತಿ, ಆಕೆ ಮಗಳು ವಿಷ ಕುಡಿದು ಆಸ್ಪತ್ರೆ ಸೇರಿದ್ದರೆ, 13 ವರ್ಷದ ಮಗ ಕೆ.ಆರ್.ನಗರದ ಮನೆಯಲ್ಲಿದ್ದಾನೆ. ಲೀಲಾವತಿ ಬೆಣಗಾಲು ಗ್ರಾಮದ ದೇವರಾಜು ಎಂಬುವವರನ್ನು ವಿವಾಹವಾಗಿದ್ದಳು. 2013ರಲ್ಲಿ ದೇವರಾಜು ಮೃತಪಟ್ಟ ಹಿನ್ನೆಲೆ ಲೀಲಾವತಿ ಚಂದಗಾಲು ಗ್ರಾಮದ ತಂದೆ ಮನೆಯಲ್ಲಿ ವಾಸವಿದ್ದರು. ಸಾಯಲು ನಿರ್ಧರಿಸಿ ಮನೆ ಬಿಟ್ಟು ಮಹದೇಶ್ವರ ಬೆಟ್ಟಕ್ಕೆ ತನ್ನ ಕುಟುಂಬ ಹೋಗುವಾಗ 13 ವರ್ಷದ ಮಗನನ್ನು ಶಾಲೆಗೆ ಕಳುಹಿಸಿ ಬಂದಿದ್ದಳು ಎಂದು ತಿಳಿದುಬಂದಿದೆ.