ಹನೂರು:ಸರ್ಕಾರದಿಂದ ದೊರಕುವ ಸವಲತ್ತುಗಳನ್ನು ಪಡೆಯಬೇಕಾದರೆ ಅಂಗವಿಕಲರು ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು ಎಂದು ಡಿಎಚ್‌ಒ ವಿಶ್ವೇಶ್ವರಯ್ಯ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಾಥಮಿಕ ಕೇಂದ್ರದ ಆವರಣದಲ್ಲಿ ಮಂಗಳವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಿಮ್ಸ್ ಗ್ರೀನ್ ಸಂಸ್ಥೆಯ ವತಿಯಿಂದ ಗುರುತಿನ ಚೀಟಿ ನೀಡುವ ಸಂಬಂಧ ಆಯೋಜಿಸಿದ್ದ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಅಂಗವಿಕಲರಿಗೆ ಸರ್ಕಾರ ಅಗತ್ಯ ಸಾಧನಗಳು ಹಾಗೂ ಸವಲತ್ತುಗಳನ್ನು ನೀಡುತ್ತಿದೆ. ಈ ಸೌಕರ್ಯಗಳನ್ನು ಪಡೆದುಕೊಳ್ಳಬೇಕಾದರೆ ಗುರುತಿನ ಚೀಟಿ ಅವಶ್ಯಕ. ಹಾಗಾಗಿ ಶಿಬಿರದ ಪ್ರಯೋಜನ ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಚಂದ್ರಶೇಖರ್, ಜಿಲ್ಲಾ ವಿಶೇಷಚೇತನರ ಕಲ್ಯಾಣಾಧಿಕಾರಿ ಸುರೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ವೈದ್ಯರಾದ ಡಾ.ಪುಷ್ಪರಾಣಿ, ಡಾ.ಮಹದೇವಪ್ರಸಾದ್, ಡಾ.ವಾಸು, ಡಾ.ನಿಖೇತನ್, ತಾಲೂಕು ವಿಶೇಷ ಚೇತನ ಸಂಪನ್ಮೂಲ ವ್ಯಕ್ತಿ ಕೃಷ್ಣ, ಶಿಬಿರದ ನೋಡೆಲ್ ಅಧಿಕಾರಿ ವೆಂಕಟೇಶ್ ಇತರರು ಇದ್ದರು.
ಡಯಾಲಿಸಿಸ್ ಸೆಂಟರ್‌ಗೆ ಮನವಿ: ಈಗಾಗಲೇ ತಾಲೂಕಿನ ಮಲೆಮಹದೇಶ್ವರ ಬೆಟ್ಟ, ದೊಡ್ಡಿಂದುವಾಡಿ ಹಾಗೂ ಪಾಳ್ಯ ಗ್ರಾಮದಲ್ಲಿ 30 ಹಾಸಿಗೆಯುಳ್ಳ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಸರ್ಕಾರದಿಂದ ಅನುಮತಿ ನೀಡಲಾಗಿದೆ. ಹನೂರಿನ 100 ಹಾಸಿಗೆಯ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಸಂಬಂಧ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಜತೆಗೆ, ಮುಖ್ಯವಾಗಿ ಡಯಾಲಿಸಿಸ್ ಸೆಂಟರ್‌ಗೆ ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ಡಿಎಚ್‌ಒ ವಿಶ್ವೇಶ್ವರಯ್ಯ ಮಾಧ್ಯಮಗಳಿಗೆ ಮಾಹಿತಿ ನೀಡಿದರು.