ಹನೂರು: ಮಹಾ ಶಿವರಾತ್ರಿ ಜಾತ್ರೆಯ ಅಂಗವಾಗಿ ಮಲೆಮಹದೇಶ್ವರ ಬೆಟ್ಟದಲ್ಲಿ ಸೋಮವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಆ ಮೂಲಕ ಮಹಾಶಿವರಾತ್ರಿ ಜಾತ್ರೆ ಸಂಪನ್ನಗೊಂಡಿತು.
ಬೆಳಗ್ಗೆ 9.40 ರಿಂದ 10.10ರವರೆಗೆ ಸಲ್ಲುವ ಶುಭ ಲಗ್ನದಲ್ಲಿ ರಥೋತ್ಸವ ಜರುಗಿಸಲು ನಿರ್ಧರಿಸಲಾಗಿತ್ತು. ಬೆಳಗಿನ ಜಾವ ದೇಗುಲದಲ್ಲಿ ಸ್ವಾಮಿಗೆ ಏಕವಾರು ರುದ್ರಾಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇಕವನ್ನು ನೆರವೇರಿಸಿದ ಬಳಿಕ ಮಹಾಮಂಗಳಾರತಿ ಬೆಳಗಲಾಯಿತು.
ಬಳಿಕ ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಬೇಡಗಂಪಣ ಅರ್ಚಕರು ಮೊದಲು ಬ್ರಹ್ಮದಾರದ ಪೂಜೆ ನೆರವೇರಿಸಿ ತೇರಿನ ಸುತ್ತ ಪ್ರದಕ್ಷಿಣೆ ಹಾಕಿ ಅರಿಶಿಣ ದಾರ ಕಟ್ಟಿದರು. ಸಂಪ್ರದಾಯದಂತೆ ತಳಿಗೆ ಮನೆ ಪೂಜೆ ನೆರವೇರಿಸಲಾಯಿತು. ಶಿವ-ಪಾರ್ವತಿಯ ಉತ್ಸವಮೂರ್ತಿಗಳನ್ನು ಬಿಳಿಕುದುರೆ ವಾಹನದಲ್ಲಿ ಕೂರಿಸಿ ಛತ್ರಿ, ಚಾಮರ ಹಾಗೂ ಮಂಗಳವಾದ್ಯದೊಂದಿಗೆ ದೇಗುಲ ಹಾಗೂ ತೇರಿನ ಸುತ್ತಲು 3 ಬಾರಿ ಪ್ರದಕ್ಷಿಣೆ ಹಾಕಲಾಯಿತು.
ದೇವರ ಮೂರ್ತಿಯನ್ನು ವಿವಿಧ ಪುಷ್ಪ, ತಳಿರು-ತೋರಣ ಹಾಗೂ ಬಣ್ಣಬಣ್ಣದ ಬಟ್ಟೆಗಳಿಂದ ದೇಗುಲದ ಮುಂಭಾಗದಲ್ಲಿ ಸಿಂಗರಿಸಲಾಗಿದ್ದ ತೇರಿನಲ್ಲಿರಿಸಿ ಸಾಲೂರು ಶ್ರೀಗಳ ಸಮ್ಮುಖದಲ್ಲಿ ಬಿಲ್ವಾರ್ಚನೆ, ಧೂಪ ಹಾಗೂ ಮಹಾಮಂಗಳಾರತಿ ನೆರವೇರಿಸಿ ಬೂದು ಕುಂಬಳಕಾಯಿ ಒಡೆಯಲಾಯಿತು. ಬೇಡಗಂಪಣ ಸಮುದಾಯದ 101 ಹೆಣ್ಣು ಮಕ್ಕಳಿಂದ ಬೆಲ್ಲದ ಆರತಿ ಬೆಳಗಿದ ನಂತರ 10.02ರಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇಗುಲದ ಮುಖ್ಯ ದ್ವಾರದ ಆವರಣದಿಂದ ಸತ್ತಿಗೆ, ಸೂರಿಪಾನಿ, ಛತ್ರಿ, ಚಾಮರ, ನಂದಿಧ್ವಜ ಕಂಬ ಹಾಗೂ ಮಂಗಳವಾದ್ಯದೊಂದಿಗೆ ತೇರನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ನಂತರ ಬೇಡಗಂಪಣ ಅರ್ಚಕರು, ಪ್ರಾಧಿಕಾರದ ಅಧಿಕಾರಿಗಳು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.
ಭಕ್ತರು ಜಯ ಘೋಷಗಳನ್ನು ಮೊಳಗಿಸುತ್ತಾ ತೇರನ್ನು ಎಳೆದು ಪುನೀತರಾದರು. ಈ ಸಂದರ್ಭದಲ್ಲಿ ಭಕ್ತರು ತೇರಿಗೆ ಹಣ್ಣು-ದವನ, ಧನ, ಧಾನ್ಯ ಎಸೆಯುವುದರ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು. ಜೈ ಮಹತ್ ಮಲೆಯಾ… ಉಘೇ ಮಾದಪ್ಪ… ಉಘೇ… ಜಯಘೋಷ ಮುಗಿಲು ಮುಟ್ಟುವಂತಿತ್ತು.
ರಥೋತ್ಸವದಲ್ಲಿ ‘ಉಮಾ’ ಭಾಗಿ:ರಥೋತ್ಸವದಲ್ಲಿ ಮ.ಬೆಟ್ಟದ ಸಾಕಾನೆ ‘ಉಮಾ’ ಪಾಲ್ಗೊಂಡು ಎಲ್ಲರ ಗಮನ ಸೆಳೆಯಿತು. ಭಕ್ತರು ನಮಿಸಿ ಆನೆಯಿಂದ ಆಶೀರ್ವಾದ ಪಡೆದರು. ಇದೇ ವೇಳೆ ಮೈಸೂರಿನ ವೀರಗಾಸೆ ತಂಡದ ಕುಣಿತ ರಥೋತ್ಸವಕ್ಕೆ ಮೆರುಗು ತಂದಿತು.
ಅನ್ನ ಬ್ರಹ್ಮೋತ್ಸವ: ರಥೋತ್ಸವ ಮುಗಿದ ಬಳಿಕ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ ಸಾನ್ನಿಧ್ಯದಲ್ಲಿ ಸ್ವಾಮಿಯ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿದ್ದ ಪಲ್ಲಕ್ಕಿಯಲ್ಲಿ ಕೂರಿಸಿ ದೇಗುಲದ ಸುತ್ತ ಮೆರವಣಿಗೆ ನಡೆಸಲಾಯಿತು. ಬಳಿಕ ಮೂರ್ತಿಯನ್ನು ದೇಗುಲಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿ ಅನ್ನಬ್ರಹ್ಮೋತ್ಸವ ನೆರವೇರಿಸಲಾಯಿತು. ಈ ವೇಳೆ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಹರಸಾಹಪಟ್ಟ ಪೊಲೀಸರು:
ಮಹಾ ರಥೋತ್ಸವದ ಹಿನ್ನೆಲೆ ಮ.ಬೆಟ್ಟದ ದೇಗುಲದ ಆವರಣದಲ್ಲಿ ಬೆಳಗ್ಗೆ 8.30 ರಿಂದಲೇ ಲಕ್ಷಾಂತರ ಭಕ್ತರು ಕಿಕ್ಕಿರಿದು ತುಂಬಿದ್ದರು. ಈ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ತೇರಿನ ಪೂಜಾ ಕೈಂಕರ್ಯದ ವೇಳೆ ಪೊಲೀಸರು ಭಕ್ತರನ್ನು ತೇರು ಸಂಚರಿಸುವ ಮಾರ್ಗದಿಂದ ದೂರ ಸರಿಸುವಂತೆ ಆಗಾಗ್ಗೆ ಸೂಚನೆ ನೀಡುತ್ತಿದ್ದರು. ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಜಮಾಯಿಸಿದ್ದ ಭಕ್ತರು ತೇರನ್ನು ಎಳೆಯಲು ಜಯಘೋಷಗಳನ್ನು ಕೂಗುತ್ತಾ ನಾ ಮುಂದು ತಾ ಮುಂದು ಎಂದು ಮುಂದೆ ಬಂದಾಗ ಪೊಲೀಸರು ಭಕ್ತರನ್ನು ದೂರ ಸರಿಸಲು ಹರಸಾಹಸಪಟ್ಟರು.
ಶಾಸಕ ಭಾಗಿ: ಶಾಸಕ ಎಂ.ಆರ್.ಮಂಜುನಾಥ್ ದೇವರ ದರ್ಶನ ಪಡೆದು ಬಿಳಿ ಕುದುರೆ ವಾಹನ ಉತ್ಸವ ಹಾಗೂ ಪೂಜಾ ಕೈಂಕಯದಲ್ಲಿ ಪಾಲ್ಗೊಂಡಿದ್ದರಲ್ಲದೇ ಮಹಾರಥೋತ್ಸವದಲ್ಲಿ ಭಾಗಿಯಾದರು. ಈ ವೇಳೆ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ. ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಬೇಡಗಂಪಣ ಅರ್ಚಕರು, ದೇಗುಲದ ಆಗಮಿಕರು, ಪ್ರಾಧಿಕಾರದ ನೌಕರರು ಇದ್ದರು.
ದೇವರ ದರ್ಶನ ಪಡೆದ ಭಕ್ತರು: ಭಕ್ತರು ಅಂತರಗಂಗೆಯ ಬಳಿ ಪುಣ್ಯ ಸ್ನಾನ ಮಾಡಿ ಧೂಪ ಹಾಕಿ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರಲ್ಲದೇ ಹುಲಿ ವಾಹನ, ರುದ್ರಾಕ್ಷಿ ವಾಹನ ಹಾಗೂ ಬಸವ ವಾಹನ ಉತ್ಸವದಲ್ಲಿ ಉತ್ಸವದಲ್ಲಿ ಪಾಲ್ಗೊಂಡು ದವಸ ಧಾನ್ಯ ಎಸೆದರು. ದಂಡಿನ ಕೋಲನ್ನು ಹೊತ್ತು ದೇವರ ಕೃಪೆಗೆ ಪಾತ್ರರಾದರು. ಕಳೆದ ಐದಾರು ದಿನಗಳಿಂದ ಅಪಾರ ಭಕ್ತರು ಮ.ಬೆಟ್ಟದಲ್ಲಿ ಬೀಡುಬಿಟ್ಟು ಪೂಜೆ ಹಾಗೂ ವಿವಿಧ ಉತ್ಸವಗಳಲ್ಲಿ ಭಾಗಿಯಾಗಿದ್ದರು. ಸೋಮವಾರ ರಥೋತ್ಸವ ಮುಗಿದ ಬಳಿಕ ಬಹುತೇಕ ಭಕ್ತರು ತಮ್ಮ ಗ್ರಾಮಗಳಿಗೆ ಹಿಂತಿರುಗಿದರು.
ಪೊಲೀಸ್ ವ್ಯವಸ್ಥೆಗೆ ಮೆಚ್ಚುಗೆ: ಈ ಬಾರಿ ಭಕ್ತರ ಸಂಖ್ಯೆಗೆ ಅನುಗುಣವಾಗಿ ಬಸ್ ಸೌಕರ್ಯ ಒದಗಿಸಲಾಗಿತ್ತು. ಇದೇ ಮೊದಲ ಬಾರಿಗೆ ಬೆಂಗಳೂರು, ಮೈಸೂರು, ಮಂಡ್ಯ, ಚಾ.ನಗರ ಸೇರಿದಂತೆ ಇನ್ನಿತರ ಕಡೆಗಳಿಗೆ ತೆರಳುವ ಬಸ್‌ಗಳ ಬಗ್ಗೆ ಭಕ್ತರಿಗೆ ಮಾಹಿತಿ ನೀಡಲು ಬಸ್ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಸೂಕ್ತ ಪೊಲೀಸ್ ವ್ಯವಸ್ಥೆ ಕಲ್ಪಿಸುವುದರ ಬಗ್ಗೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಯಿತು.