???????????????????????????????????? 
ಜಿಲ್ಲೆ

ವಿದ್ಯುತ್ ಟಿಸಿಗೆ ಶಾಸಕ ಮಂಜುನಾಥ ಮನವಿ

ಕಿರಣ್ ಮಾದರಹಳ್ಳಿ

ಹನೂರು: ರೈತರ ಅನುಕೂಲಕ್ಕಾಗಿ ನೀರಾವರಿಯ ಪಂಪ್‌ಸೆಟ್‌ಗಳಿಗೆ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಟಿಸಿ ಅಳವಡಿಸುವಂತೆ ಶಾಸಕ ಎಂ.ಆರ್.ಮಂಜುನಾಥ್ ಮನವಿ ಮಾಡಿದರು.

ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು, ಹನೂರು ಭಾಗದಲ್ಲಿ ರೈತರು ವಿದ್ಯುತ್ ಕೊರತೆಯಿಂದ ನೀರಾವರಿ ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ ಡಿಸೆಂಬರ್‌ವರೆಗೆ ರೈತರ ಬೇಡಿಕೆಗೆ ಅನುಗುಣವಾಗಿ ಟಿಸಿ ಪೂರೈಸಲಾಗಿದ್ದು, ಇದುವರೆಗೆ ಅಳವಡಿಸಿಲ್ಲ. ಒಂದು ಟಿಸಿಯನ್ನು 8-10 ಪಂಪ್‌ಸೆಟ್‌ಗಳಿಗೆ ಅಳವಡಿಸಲಾಗಿದೆ. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಮುಂಗಾರು ಆರಂಭವಾಗಿರುವುದರಿಂದ ಸಚಿವರು ಈ ಬಗ್ಗೆ ಗಮನಹರಿಸಿ ಸಮರ್ಪಕವಾಗಿ ವಿದ್ಯುತ್ ಪರಿವರ್ತಕಗಳನ್ನು ಪೂರೈಸಬೇಕು ಎಂದು ಕೋರಿದರು.

ಇಂಧನ ಸಚಿವ ಕೆ.ಜೆ ಜಾರ್ಜ್ ಪ್ರತಿಕ್ರಿಯಿಸಿ, 2004 ರಿಂದಲೂ ಅಕ್ರಮ, ಸಕ್ರಮ ಯೋಜನೆ ಜಾರಿಯಲ್ಲಿದೆ. ಆದರೆ, ಕೆಲವರು ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸದೆ ಅಕ್ರಮವಾಗಿ ವಿದ್ಯುತ್ ಪಡೆಯುತ್ತಿದ್ದಾರೆ. ಇದರಿಂದ ವಿದ್ಯುತ್ ಪರಿವರ್ತಕ ಸುಟ್ಟು ಹೋಗಲು ಕಾರಣವಾಗಿದೆ. ಆದರೂ ಟಿಸಿ ಒದಗಿಸಲಾಗುತ್ತಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಳ್ಳುವ ಚಿಂತನೆ ನಡೆದಿದೆ. ಜತೆಗೆ ಸೋಲಾರ್ ಪಂಪ್‌ಸೆಟ್ ಮೂಲಕ 7-8 ಗಂಟೆಗಳ ಕಾಲ ನಿರಂತರ ನೀರು ಒದಗಿಸುವ ತಂತ್ರಗಾರಿಕೆಯು ನಡೆಯುತ್ತಿದೆ. ಹನೂರು ಕ್ಷೇತ್ರಕ್ಕೆ ಅಕ್ರಮ, ಸಕ್ರಮ ಯೋಜನೆಯಡಿ 439 ಟಿಸಿಗಳು ಅಗತ್ಯವಿದ್ದು, ಟೆಂಡರ್ ಬಳಿಕ ಆದ್ಯತೆ ಮೇರೆಗೆ ಪೂರೈಸಲಾಗುವುದು. ತುರ್ತು ಅಗತ್ಯವಿದ್ದಲ್ಲಿ ಕೊಳ್ಳೇಗಾಲ ಉಪ ವಿಭಾಗದ ವತಿಯಿಂದ ಒದಗಿಸಲಾಗುವುದು ಎಂದು ಉತ್ತರಿಸಿದರು.