ಜಿಲ್ಲೆ

ಶ್ರೀ ಕೋಣನಮಾರಮ್ಮನ ಜಾತ್ರೋತ್ಸವ ಅಂಗವಾಗಿ ಮೆರವಣಿಗೆ

ಕಿರಣ್ ಮಾದರಹಳ್ಳಿ

ಹನೂರು : ಆದಿಶಕ್ತಿ ಶ್ರೀ ಕೋಣನಮಾರಮ್ಮನ ಜಾತ್ರೋತ್ಸವದ ಅಂಗವಾಗಿ ಬುಧವಾರ ಕಣ್ಣೂರು, ಆನಾಪುರ ಹಾಗೂ ಮಂಗಲ ಗ್ರಾಮದಲ್ಲಿ ದೇವಿಯ ಉತ್ಸವಮೂರ್ತಿ ಹಾಗೂ ಬೀರದೇವರ ಮೆರವಣಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಮೆರವಣಿಗೆಯ ಹಿನ್ನೆಲೆಯಲ್ಲಿ ಗ್ರಾಮಗಳಲ್ಲಿ ತಳಿರು ತೋರಣದಿಂದ ಸಿಂಗಾರ ಮಾಡಲಾಗಿತ್ತು. ಬೆಳಗ್ಗೆ ಮೋಡಳ್ಳಿ ಬೀರೇಶ್ವರ ದೇಗುಲದಿಂದ ಆಗಮಿಸಿದ ಬೀರದೇವರು ಹಾಗೂ ಉತ್ಸವ ಮೂರ್ತಿಯನ್ನು ಕಣ್ಣೂರು ಗ್ರಾಮಸ್ಥರು ಸಂಪ್ರದಾಯದಂತೆ ಬರಮಾಡಿಕೊಂಡರು. ಬಳಿಕ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರತಿ ಬಡಾವಣೆಯಲ್ಲೂ ಮೆರವಣಿಗೆ ನಡೆಯಿತು.

ಈ ವೇಳೆ ಪ್ರತಿ ಮನೆಯವರು ಭಕ್ತರು ಹಣ್ಣು-ಕಾಯಿ ನೀಡಿ ಪೂಜೆ ಸಲ್ಲಿಸಿದರು. ವಾದ್ಯದ ತಾಳಕ್ಕೆ ಕಲ್ಲುಕಟ್ಟೆ, ಬೀರೇಶ್ವರ, ಕೋಣನ ಮಾರಮ್ಮ ಹಾಗೂ ದೊಡ್ಡಮ್ಮತಾಯಿ ಅರ್ಚಕರು ಆವೇಷಭರಿತವಾಗಿ ಕುಣಿದು ಕುಪ್ಪಳಿಸಿದಾಗ ನೆರೆದಿದ್ದ ಭಕ್ತರಲ್ಲಿ ದೈವಿಕತೆ ಇಮ್ಮಡಿಗೊಂಡಿತು. ಮಧ್ಯಾಹ್ನ 3ರ ಬಳಿಕ ಅನಾಪುರ ಗ್ರಾಮದಲ್ಲೂ ಮೆರವಣಿಗೆಯನ್ನು ನಡೆಸಲಾಯಿತು. ಸಂಜೆ 4.30ರ ವೇಳೆಗೆ ಮಂಗಲಕ್ಕೆ ಆಗಮಿಸಿದ ಉತ್ಸವ ಮೂರ್ತಿಯನ್ನು ಗ್ರಾಮದ ದೊಡ್ಡಕೆರೆ ಏರಿಯ ಬಳಿ ತೂಗುಯ್ಯಲೆಯಲ್ಲಿ ಕೂರಿಸಲಾಯಿತು.

ಮಂಗಲದಲ್ಲಿ ಹೆಬ್ಬರದ ಮೆರವಣಿಗೆ: 25 ವರ್ಷದ ಬಳಿಕ ಸುತ್ತೇಳು ಹಳ್ಳಿಗಳಲ್ಲಿ ನಡೆಯುವ ಈ ಜಾತ್ರೋತ್ಸವದಲ್ಲಿ ಹೆಬ್ಬರ (ಬೃಹತ್ ಡೋಲು) ಪ್ರಮುಖ ಆಕರ್ಷಣೆಯಾಗಿತ್ತು. ಮಂಗಳವಾರ ತಡರಾತ್ರಿ ಉಪವಾಸವಿದ್ದ ಮಹಿಳೆಯರು ನೀರಿನ ಆಸರೆಯಿರುವ ಸ್ಥಳಕ್ಕೆ ತೆರಳಿ ಹೊಸನೀರು ತಂದು ಸೌದೆ ಒಲೆಯಿಂದ ಮಡೆ (ಅನ್ನ) ತಯಾರಿಸಿದ್ದರು. ಬುಧವಾರ ಸಂಜೆ 5ರ ವೇಳೆಯಲ್ಲಿ ಕೋಣನಮಾರಮ್ಮ ಹಾಗೂ ದೊಡ್ಡಮ್ಮತಾಯಿ ದೇಗುಲಕ್ಕೆ ತೆರಳಿ ಹೆಬ್ಬರಗಳಿಗೆ ಅರಿಶಿನ, ಕುಂಕುಮ, ದೀಪದ ಎಣ್ಣೆ, ಸೀಗೆಕಾಯಿ, ಹಣ್ಣು, ಕಾಯಿ ಹಾಗೂ ದವಸ-ಧಾನ್ಯ ಎಡೆ ನೀಡಿ ಪೂಜೆ ಸಲ್ಲಿಸಿದರು. ಸಂಜೆ 6ರ ಬಳಿಕ ಗ್ರಾಮದ ಕೆರೆ ಏರಿಯಿಂದ ಮುಖ್ಯ ರಸ್ತೆ ಸೇರಿದಂತೆ ವಿವಿಧ ಬಡಾವಣೆಯಲ್ಲಿ ಸತ್ತಿಗೆ, ಸೂರಿಪಾನಿ, ವಾದ್ಯಮೇಳ ಹಾಗೂ ಹೆಬ್ಬರಗಳೊಂದಿಗೆ ಉತ್ಸವ ಮೂರ್ತಿಯ ಮೆರವಣಿಗೆಯೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಈ ವೇಳೆ ಅರ್ಚಕರು ಸಾಂಪ್ರದಾಯಿಕ ಭಕ್ತರಿಗೆ ತಲೆಯ ಮೇಲೆ ತೆಂಗಿನಕಾಯಿ ಒಡೆಯುವುದರ ಮೂಲಕ ಪವಾಡ ಮೆರೆದರು. ನೆರೆದಿದ್ದವರಲ್ಲಿ ವಿಸ್ಮಯ ಮೂಡಿಸಿತು. ಯುವಕರು ಮೆರವಣಿಗೆಯುದ್ದಕ್ಕೂ ವಾದ್ಯದ ತಾಳಕ್ಕೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಮಂಗಲ ಸೇರಿದಂತೆ, ಮೋಡಳ್ಳಿ, ಕಣ್ಣೂರು, ಆನಾಪುರ, ಹನೂರು, ಗುಂಡಾಪುರ, ಕಾಮಗೆರೆ ಹಾಗೂ ಇನ್ನಿತರ ಗ್ರಾಮದ ಭಕ್ತರು ಭಾಗಿಯಾಗಿದ್ದರು. ಆಯಾ ಗ್ರಾಮಗಳಲ್ಲಿ ಮಜ್ಜಿಗೆ, ಪಾನಕ ಹಾಗೂ ಅನ್ನ ಸಂತರ್ಪಣೆ ನಡೆಯಿತು.