ಹನೂರು: ಮೊಳಗಿದ ಜಯಘೋಷ… ಗಾರುಡಿಗ ಗೊಂಬೆಗಳ ನೃತ್ಯದ ರಸದೌತಣ…ಕುಣಿದು ಕುಪ್ಪಳಿಸಿದ ಯುವ ಸಮೂಹ…ಪಟಾಕಿ, ಡೋಲು, ನಗಾರಿ, ತಮಟೆಗಳ ಶಬ್ದ…
ಇದು ಹನೂರಿನಲ್ಲಿ ಗುರುವಾರ ಒಕ್ಕಲಿಗರ ಸಂಘದ ವತಿಯಿಂದ ಆಯೋಜಿಸಿದ್ದ 514ನೇ ನಾಡಪ್ರಭು ಕೆಂಪೇಗೌಡ ಜಯಂತಿಹಿನ್ನೆಲೆಯಲ್ಲಿ ಆಯೋಜಿಸಿದ್ದ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯಗಳು.
ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿದ್ದ ತೆರೆದ ವಾಹನದಲ್ಲಿನ ಕೆಂಪೇಗೌಡ ಪ್ರತಿಮೆ ಮೆರವಣಿಗೆಗೆ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಪಟ್ಟಣದ ಆರ್‌ಎಂಸಿ ಆವರಣದಲ್ಲಿ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಂಗಳವಾದ್ಯದೊಂದಿಗೆ ಕಲಾ ತಂಡಗಳು ಹಾಗೂ ಸಮುದಾಯದ ಸಾವಿರಾರು ಜನರು ಮಲೆಮಹದೇಶ್ವರ ಬೆಟ್ಟ ಮುಖ್ಯ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ಬಸ್ ನಿಲ್ದಾಣದಿಂದ ಬೆಟ್ಟಳ್ಳಿ ಮಾರಮ್ಮನ ದೇಗುಲದವರೆಗೆ ಸಾಗಿದರು.
ಮಾಜಿ ಶಾಸಕ ಆರ್.ನರೇಂದ್ರ, ಪುತ್ರ ನವನೀತ್‌ಗೌಡ, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಎಸ್.ದತ್ತೇಶ್‌ಕುಮಾರ್, ಒಕ್ಕಲಿಗರ ಸಂಘದ ಅಧ್ಯಕ್ಷ ಹನೂರು ಲಿಂಗರಾಜು, ಕೊಳ್ಳೇಗಾಲದ ರಾಚೇಗೌಡ, ವೈದ್ಯರಾದ ಡಾ.ಪ್ರಕಾಶ್, ಡಾ.ಮಂಜುನಾಥ್ ಹಾಗೂ ಇತರ ಗಣ್ಯರು ಇದ್ದರು. ಡಿವೈಎಸ್ಪಿ ಸೋಮೇಗೌಡ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಮೆರವಣಿಗೆಯುದ್ದಕ್ಕೂ ಯುವ ಸಮೂಹ ಪಟಾಕಿ ಸಿಡಿಸುತ್ತ ಡೋಲು, ನಗಾರಿ, ತಮಟೆ ತಾಳಕ್ಕೆ ಉತ್ಸಾಹದಿಂದ ಕುಣಿದು ಕುಪ್ಪಳಿಸಿತು.
ಇದಕ್ಕೂ ಮುನ್ನ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ನಾಡಪ್ರಭು ಕೆಂಪೇಗೌಡರು 16ನೇ ಶತಮಾನದಲ್ಲಿಯೇ ಬೆಂಗಳೂರು ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಇದರ ಫಲವಾಗಿ ಇಂದು ಬೆಂಗಳೂರು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದುವುದರ ಮೂಲಕ ವಿಶ್ವ ಮನ್ನಣೆ ಗಳಿಸಿದ್ದು, ಸಿಲಿಕಾನ್ ಸಿಟಿ ಎಂಬ ಖ್ಯಾತಿ ಪಡೆದಿರುವುದು ಹೆಮ್ಮೆಯ ಸಂಗತಿ. ಆದ್ದರಿಂದ ಕೆಂಪೇಗೌಡರ ಸಾಧನೆ ಮಕ್ಕಳಿಗೆ ಪ್ರೇರಣೆಯಾಗಬೇಕು ಎಂದರು.