ಹನೂರು: ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಶ್ರೀ ಮಾದಪ್ಪನ ಸನ್ನಿಧಿಯಲ್ಲಿ ಬುಧವಾರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖ ಗೋ ಪೂಜೆ ಹಾಗೂ ಆಲಂಬಾಡಿ ಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ದೇಗುಲದಲ್ಲಿ ಮುಂಜಾನೆ ಮಾದಪ್ಪನಿಗೆ ಅಭಿಷೇಕ ಹಾಗೂ ಧೂಪ ದೀಪಾದಾರತಿ ಸೇವೆಯೊಂದಿಗೆ ಪೂಜಾ ಕೈಂಕರ್ಯವನ್ನು ನೆರವೇರಿಸಲಾಯಿತು. ನಂತರ 5.30ರಲ್ಲಿ ವಿವಿಧ ಪುಷ್ಪ, ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಆಲಂಬಾಡಿ ಶ್ರೀ ಬಸವೇಶ್ವರ ಸ್ವಾಮಿಗೆ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬೇಡಗಂಪಣ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು.
ನೆರೆದಿದ್ದ ಭಕ್ತರು ವಿಶೇಷ ಪೂಜೆಯನ್ನು ಕಣ್ತುಂಬಿಕೊಂಡು ಭಕ್ತಿಭಾವ ಮೆರೆದರು. ಹಣ್ಣು -ಕಾಯಿ ನೀಡಿ
ನೈವೇದ್ಯ ಸಲ್ಲಿಸಿದರು. ದೇಗುಲದ ಒಳಾಂಗಣದಲ್ಲಿ ಶ್ರೀಗಳ ಸಮ್ಮುಖದಲ್ಲಿ ಗೋ ಪೂಜೆ ನೆರವೇರಿಸಲಾಯಿತು. ಈ ವೇಳೆ ಹೂವಿನ ಹಾರ ಹಾಕಿ ಅಲಂಕಾರ ಗೊಳಿಸಿದ್ದ ಗೋವುಗಳಿಗೆ ಧೂಪಧಾರತಿ, ಮಹಾಮಂಗಳಾರತಿ ಬೆಳಗಲಾಯಿತು. ಕಬ್ಬು, ಬೆಲ್ಲ, ಎಳ್ಳು ಹಾಗೂ ಕೊಬ್ಬರಿಯನ್ನು ನೀಡಲಾಯಿತು. ದೇಗುಲದ ಆಗಮಿಕರು, ಬೇಡಗಂಪಣ ಅರ್ಚಕರು ಹಾಗೂ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ಇದ್ದರು.