ಹನೂರು : ತಾಲೂಕಿನ ಬೂದುಬಾಳು ಗ್ರಾಮದಲ್ಲಿ ಶನಿವಾರ ರಾತ್ರಿ ಪಲ್ಲಕ್ಕಿ ಉತ್ಸವದ ವೇಳೆ ನರ್ತಿಸುವ ವಿಚಾರವಾಗಿ ನಡೆದ ಗಲಾಟೆ ಸಂಬಂಧ ನಾಲ್ವರ ವಿರುದ್ಧ ಜಾತಿ ನಿಂದನೆ ಆರೋಪದ ದೂರು ದಾಖಲಾಗಿದೆ.
ಜಾತ್ರೆ ಹಿನ್ನೆಲೆ ರಾತ್ರಿ 10ರ ವೇಳೆಯಲ್ಲಿ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಆದಿ ಜಾಂಬವ ಸಮುದಾಯಕ್ಕೆ ಸೇರಿದ ಯುವಕರು ಕುಣಿಯುತ್ತಿದ್ದರು. ಈ ಬಗ್ಗೆ ಪ್ರಶ್ನಿಸಿದ ಕುಂಚಿಟಿಗ ಸಮುದಾಯದ ಯುವಕರು ಅವಾಚ್ಯವಾಗಿ ನಿಂದಿಸಿ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಗ್ರಾಮದ ಚಂದು ಎಂಬುವರು ಆಕಾಶ್, ಮನೋಜ, ಶ್ರೀನಿವಾಸ್ ಹಾಗೂ ಕಾರ್ತಿಕ್ ಎಂಬುವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಹನೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಎಸೈ ಮಂಜುನಾಥ್ ಪ್ರಸಾದ್ ತನಿಖೆ ಮುಂದುವರಿಸಿದ್ದಾರೆ.