oppo_2 
ಜಿಲ್ಲೆ

ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇ

ಸಚಿವ ಸಂಪುಟದ ಅನುಮೋದನೆ

  • ಹನೂರು: ತಾಲೂಕಿನ ಹೋಬಳಿ ಕೇಂದ್ರ ರಾಮಾಪುರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟದಿಂದ ಅನುಮೋದನೆ ದೊರಕಿದ್ದು, ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಆದೇಶ ಹೊರಡಿಸಿದ್ದಾರೆ. ಇದರಿಂದ ಈ ಭಾಗದ ಜನತೆ ಎದುರಿಸುತ್ತಿದ್ದ ಆರೋಗ್ಯ ಸೇವೆಯ ಸಮಸ್ಯೆಯಿಂದ ಕೊಂಚ ನಿಟ್ಟುಸಿರು ಬಿಟ್ಟಂತಾಗಿದೆ. ರಾಮಾಪುರ ಹೋಬಳಿ ಕೇಂದ್ರ ಸ್ಥಾನ. ಇಲ್ಲಿ ದಶಕದ ಹಿಂದೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ
    ಸ್ಥಾಪಿಸಲಾಯಿತು. ಇದರ ವ್ಯಾಪ್ತಿಗೆ ಪುದು ರಾಮಾಪುರ, ದಿನ್ನಳ್ಳಿ, ಮಾರಳ್ಳಿ, ಪಳನಿಮೇಡು, ಕೆಂಪಯ್ಯನಹಟ್ಟಿ, ದೊಡ್ಡಲತ್ತೂರು ಹಾಗೂ ಈ ಭಾಗದ ಇನ್ನಿತರೆ ಗ್ರಾಮಗಳು ಸೇರಿದೆ. ಇಲ್ಲಿನ ಜನರು ತುರ್ತು ಚಿಕಿತ್ಸೆ, ಹೆರಿಗೆ, ಸಾಮಾನ್ಯ ಆರೋಗ್ಯ ಚಿಕಿತ್ಸೆ ಹಾಗೂ ಇನ್ನಿತರೆ ಸಂದರ್ಭದಲ್ಲಿ ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಆದರೆ ಇಲ್ಲಿ ಅಗತ್ಯ ವೈದ್ಯ ಸಿಬ್ಬಂದಿಗಳ ಹಾಗೂ ಮೂಲ ಸೌಕರ್ಯ ಕೊರತೆಯಿಂದ ಈ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರಕುತ್ತಿರಲಿಲ್ಲ. ಜತೆಗೆ ಕೆಲವೊಂದು ದಿನಗಳಲ್ಲಿ ಹಾಗೂ ರಾತ್ರಿ ವೇಳೆ ವೈದ್ಯರೂ ಸಿಗುತ್ತಿರಲಿಲ್ಲ. ಇದರಿಂದ ಈ ಆಸ್ಪತ್ರೆಯಿಂದ ಉತ್ತಮ ಆರೋಗ್ಯ ಸೇವೆ ದೊರಕದಂತಾಗಿತ್ತು. ಹಾಗಾಗಿ ಈ ಆಸ್ಪತ್ರೆಯಲ್ಲಿ ರೋಗಿಗಳು ಅಗತ್ಯ ಚಿಕಿತ್ಸೆ ಪಡೆಯುವುದೇ ಒಂದು ದೊಡ್ಡ ಸಮಸ್ಯೆಯಾಗಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು.
    ಈ ನಿಟ್ಟಿನಲ್ಲಿ ಸಾರ್ವಜನಿಕರು ಕಳೆದ 2 ವರ್ಷದಿಂದ ಈ ಆಸ್ಪತ್ರೆಗೆ ಅಗತ್ಯ ವೈದ್ಯರು, ಸಿಬ್ಬಂದಿ ನಿಯೋಜಿಸುವಂತೆ ಒತ್ತಾಯಿಸುತ್ತಲೇ ಇದ್ದರು. ಜತೆಗೆ ತುರ್ತು ಸಂದರ್ಭ ಪ್ರತಿಭಟನೆ ನಡೆಸಿದ ಘಟನೆಗಳೂ ನಡೆದಿದ್ದವು. ಆಗ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ವಹಿಸುವುದಾಗಿ ಭರವಸೆ ನೀಡುತ್ತಿದ್ದರು. ಈ ಬಗ್ಗೆ ಅಗತ್ಯ ಮುತುರ್ವಜಿ ವಹಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
    ಇದರ ಫಲವಾಗಿ ಇದೀಗ ಈ ಆಸ್ಪತೆಯನ್ನು ಸಮುದಾಯ ಆರೋಗ್ಯ ಕೇಂದ್ರವಾಗಿಸಲು ಸರ್ಕಾರ ಕ್ರಮವಹಿಸಿರುವುದು ಹೊಸ ಭರವಸೆ ಮೂಡಿಸಿದೆ. ಇದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ. ಜತೆಗೆ ಇದುವರೆಗೂ ಸರಿಯಾದ ಚಿಕಿತ್ಸೆ ದೊರಕದೇ ಅನುಭವಿಸುತ್ತಿದ್ದ ಯಾತನೆಯಿಂದ ಜನತೆ ಕೊಂಚ ನಿರಾಳ ಹೊಂದುವಂತಾಗಿದೆ. ಈ ಕಾರ್ಯವನ್ನು ಆದಷ್ಟು ಬೇಗ ಅನುಷ್ಠಾನಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.