ಹನೂರು : ತಾಲೂಕಿನ ಕೂಡಲೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವು ಭಾನುವಾರ ರಾತ್ರಿ ಬೀಗ ಹಾಕಿದ್ದ ಪರಿಣಾಮ ರೋಗಿಗಳು ಚಿಕಿತ್ಸೆ ಸಿಗದೇ ಪರದಾಡಿದರು. ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವು 24 ಗಂಟೆಗಳ ಸೇವಾ ಸೌಲಭ್ಯವನ್ನು ಹೊಂದಿದೆ. ಹಾಗಾಗಿ ರಾತ್ರಿ 8.20ರ ವೇಳೆಯಲ್ಲಿ ನಾಲ್ವರು ರೋಗಿಗಳು ಅನಾರೋಗ್ಯದ ನಿಮಿತ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದರು. ಆದರೆ ಇಲ್ಲಿ ವೈದ್ಯರಾಗಲೀ, ಸಿಬ್ಬಂದಿಯಾಗಲೀ ಇರಲಿಲ್ಲ. ಬಾಗಿಲಿಗೆ ಬೀಗ ಹಾಕಿದ್ದ ಕಾರಣ ರೋಗಿಗಳು ಮನೆಗೆ ಹಿಂತಿರುಗಿ ತೊಂದರೆ ಅನುಭವಿಸಿದರು. ಈ ಬಗ್ಗೆ ಸಾರ್ವಜನಿಕರು ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದು
ಚರ್ಚೆಗೆ ಗ್ರಾಸವಾಗಿದೆ.