ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಅಭಿಮತ
- ಹನೂರು : ಮಾನವ ಕಳ್ಳ ಸಾಗಣೆ ದೇಶದ ಅಭಿವೃದ್ಧಿಗೆ ಮಾರಕ ಎಂದು ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ತಿಳಿಸಿದರು. ಪಟ್ಟಣದ ಜಿ.ವಿ ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಮಾನವ ಕಳ್ಳ ಸಾಗಣೆ ತಡೆ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾನವ ಕಳ್ಳ ಸಾಗಣೆ ಒಂದು ದೊಡ್ಡ ಸಾಮಾಜಿಕ ಪಿಡುಗು. ಕೆಲವರು ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದರಿಂದ ಮಕ್ಕಳು, ಯುವತಿಯರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಲಿ ಪಶುಗಳಾಗುತ್ತಿದ್ದಾರೆ. ಆದರೆ ಕೆಲ ಪಾಲಕರಿಗೆ ಈ ಬಗ್ಗೆ ಅರಿವೇ ಇರುವುದಿಲ್ಲ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಂಡು ಜಾಗೃತರಾಗಬೇಕು. ಕುಟುಂಬಸ್ಥರಲ್ಲೂ ಅರಿವು ಮೂಡಿಸಬೇಕು. ಇದರಿಂದ ಮಾನವ ಕಳ್ಳ ಸಾಗಣೆ ಕೃತ್ಯ ತಡೆಗಟ್ಟಬಹುದು ಎಂದು ಅವರು ಹೇಳಿದರು. ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಪ್ರಸಾದ್ ಮಾತನಾಡಿ, ಶಾಲಾ, ಕಾಲೇಜಿಗೆ ತೆರಳುವ ವೇಳೆ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು. ಅಪರಿಚಿತರ ಬಗ್ಗೆ ಎಚ್ಚರಿಕೆ ವಹಿಸಬೇಕು. ಮೊಬೈಲ್ ಫೋನ್ ಸೌಲಭ್ಯವನ್ನು ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಿಕೊಳ್ಳಬೇಕು. ಜತೆಗೆ ಮಾನವ ಕಳ್ಳ ಸಾಗಣೆ ಸುಳಿವು ದೊರಕಿದರೆ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ತಾಲೂಕು ಯೋಜನಾಧಿಕಾರಿ ನಂಜಮಣಿ, ಬಿಇಒ ಗುರುಲಿಂಗಯ್ಯ, ವಕೀಲ ನಂದಕುಮಾರ್, ಪ್ರಾಂಶುಪಾಲ ಲಾಸರ್ ಇತರರು ಇದ್ದರು.