ಹನೂರು : ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೋಮವಾರ ಭೂಮಿಪೂಜೆ ನಡೆಸಿದ ರಸ್ತೆ ಅಭಿವೃದ್ಧಿ ನಿರ್ಮಾಣ ಕಾಮಗಾರಿಗಳಲ್ಲಿ ಹಾಲಿ ಶಾಸಕರ ಪರಿಶ್ರಮವೇ ಇಲ್ಲ ಎಂದು ಮಾಜಿ ಶಾಸಕ ಆರ್.ನರೇಂದ್ರ ಆರೋಪಿಸಿದರು.
ನಾನು 3 ನೇ ಅವಧಿಯಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಈ ವೇಳೆ ತೀವ್ರ ಹದಗೆಟ್ಟಿದ್ದ ದೊಡ್ಡಿಂದುವಾಡಿ ಕೊತ್ತನೂರು, ಬಂಡಳ್ಳಿ - ಹನೂರು, ಸತ್ತೇಗಾಲ - ಪಾಳ್ಯ, ಹನೂರು ಕೌದಳ್ಳಿ, ಶಾಗ್ಯ ಗಾಣಿಗ ಮಂಗಲ ಸೇರಿದಂತೆ ಇನ್ನಿತರ ರಸ್ತೆ ಅಭಿವೃದ್ಧಿ ಸಂಬಂಧ 78 ಕೋಟಿ ರೂ. ವೆಚ್ಚದಲ್ಲಿ ಕ್ರಿಯಾಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದರಲ್ಲಿ ಬಂಡಳ್ಳಿ - ಹನೂರು, ದೊಡ್ಡಿಂದುವಾಡಿ ಕೊತ್ತನೂರು ರಸ್ತೆಗೆ ಅನುಮೋದನೆ ದೊರಕಿತ್ತು. ಆದರೆ ಕಾಂಗ್ರೆಸ್ ಶಾಸಕ ಎಂದು ತಿಳಿದು ಬಿಜೆಪಿ ಸರ್ಕಾರ ಅನುದಾನ ನೀಡಿರಲಿಲ್ಲ. ಇದರಿಂದ ರಸ್ತೆ ಅಭಿವೃದ್ಧಿ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಇದೀಗ ಅಧಿಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗಮನಕ್ಕೆ ತರಲಾಗಿತ್ತು. ನನ್ನ ಶ್ರಮದ ಫಲದಿಂದ ಇದೀಗ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ 67 ಕೋಟಿ ದೊರೆತಿದೆ. ಇದರಲ್ಲಿ ಹಾಲಿ ಶಾಸಕರ ಪಾತ್ರವೇನೂ ಇಲ್ಲ. ಭೂಮಿಪೂಜೆ ನೆರವೇರಿಸುತ್ತಿದ್ದಾರೆ ಅಷ್ಟೇ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಸಕರಿಗೆ ಪ್ರಚಾರದ ಗೀಳು: ನಾನು ಶಾಸಕನಾಗಿದ್ದ ವೇಳೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. 108 ಕೋಟಿ ರೂ. ವೆಚ್ಚದಲ್ಲಿ ಕೆ-ಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿ, 450 ಕೋಟಿ ರೂ. ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ತಲಾ 17.5 ಕೋಟಿ ರೂ. ವೆಚ್ಚದಲ್ಲಿ ಪಾಳ್ಯ, ರಾಮಾಪುರದಲ್ಲಿ ಇಂದಿರಾಗಾಂಧಿ ಮಾದರಿ ವಸತಿ ಶಾಲೆಗಳ ಸ್ಥಾಪನೆ, ತಲಾ 8.5 ಕೋಟಿ ರೂ. ವೆಚ್ಚದಲ್ಲಿ ಮಹದೇಶ್ವರಬೆಟ್ಟ, ಪಾಳ್ಯ ಹಾಗೂ ದೊಡ್ಡಿಂದುವಾಡಿಯಲ್ಲಿ ಆಸ್ಪತ್ರೆ ನಿರ್ಮಾಣ, 9 ಕೋಟಿ ರೂ. ವೆಚ್ಚದಲ್ಲಿ ಪ್ರಮುಖ ಸೇತುವೆಗಳ ನಿರ್ಮಾಣ, 600 ವರ್ಷಗಳ ಇತಿಹಾಸವಿರುವ ಯಡಕುರಿಯ ಸೇತುವೆ ನೀರ್ಮಾಣ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಟಾನ ಸೇರಿದಂತೆ ಇನ್ನಿತರ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಕ್ಷೇತ್ರದ ಅಭಿವೃದ್ಧ್ದಿಗೆ ಹೆಚ್ಚಿನ ಒತ್ತು ನೀಡಲಾಗಿತ್ತೇ ಹೊರತು ಈವರೆಗೂ ಪ್ರಚಾರ ಗಿಟ್ಟಿಸಿಕೊಂಡಿಲ್ಲ. ಆದರೆ ಹಾಲಿ ಶಾಸಕರಿಗೆ ಹಾಗೂ ಹಿಂಬಾಲಕರಿಗೆ ಪ್ರಚಾರದ ಗೀಳು. ಈಗಾಗಿ ಭೂಮಿಪೂಜೆ ಕಾರ್ಯಕ್ರಮಕ್ಕೂ ಫ್ಲೆಕ್ಸ್ ಅಳವಡಿಸಿರುವುದು ಪ್ರಚಾರದ ಗೀಳಿಗೆ ಸಾಕ್ಷಿಯಾಗಿದೆ. ಶಾಕರಾದವರಿಗೆ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೇ ಹೊರತು ಪ್ರಚಾರ ಗಿಟ್ಟಿಸಿಕೊಳ್ಳುವುದಲ್ಲ. ಸರ್ಕಾರದಿಂದ ಹೆಚ್ಚಿನ ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲಿ. ಇದಕ್ಕೆ ನಾನು ಸಹ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಟೆಂಡರ್‌ಗೂ ಮುನ್ನವೇ ಭೂಮಿಪೂಜೆ: ನಾನು ಮೊದಲ ಬಾರಿಗೆ ಶಾಸಕನಾಗಿದ್ದ ವೇಳೆ 82 ಗಿರಿಜನರ ಹಾಡಿಗಳಲ್ಲಿ 20 ಪೋಡುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಇನ್ನುಳಿದ ಹಾಡಿಗಳಿಗೆ ಸೋಲಾರ್ ಸೌಕರ್ಯ ಒದಗಿಸಲಾಗಿತ್ತು. ಇದೀಗ ಕಾಂಗ್ರೆಸ್ ಸರ್ಕಾರ 40 ಕೋಟಿ ರೂ. ವೆಚ್ಚದಲ್ಲಿ ಹಾಡಿಗಳಿಗೆ ವಿದ್ಯುತ್ ಸೌಕರ್ಯ ಚಾಲನೆ ನೀಡಲಾಗಿದ್ದು, ಪ್ರಗತಿಯಲ್ಲಿದೆ. ಇನ್ನು ಸಚಿವ ಸಂಪುಟ ಸಭೆಗೆ ಆಗಮಿಸಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರು ಗೋಪೀನಾಥಂ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದರು. ಈ ವೇಳೆ 4.5 ಕಿ.ಮೀ ರಸ್ತೆ ಮರುಡಾಂಬರೀಕರಣಕ್ಕೆ ಅನುಮೋದನೆಯನ್ನಷ್ಟೇ ನೀಡಿದರು. ಆದರೆ ಹಾಲಿ ಶಾಸಕರು ಟೆಂಡರ್ ಆಗದೇ ಭೂಮಿಪೂಜೆಯನ್ನು ನೆರವೇರಿಸಿದ್ದಾರೆ. ಇನ್ನು ಹಾಡಿಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಸಂಬಂದ ಸಚಿವರಾದ ಡಾ.ಎಚ್.ಸಿ ಮಹದೇವಪ್ಪ, ಕೆ. ವೆಂಕಟೇಶ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಆದರೆ ಹಾಲಿ ಶಾಸಕರು ಯಾವೊಂದು ಸಭೆಗೂ ಭಾಗವಹಿಸಿಲ್ಲ. ಹೀಗಿರುವಾಗ ಜನರಿಗೆ ಸೇವೆ ಒದಗಿಸುವುದು ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿರುವುದಾಗಿ ತಿಳಿಸುವುದು ಎಷ್ಟರ ಮಟ್ಟಿಎ ಸರಿ? ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನೂರಿನ ಮುಕುಂದವರ್ಮ, ರಾಮಾಪುರದ ಈಶ್ವರ್, ಪಪಂ ಸದಸ್ಯ ಗಿರೀಶ್, ಮುಖಂಡರಾದ ಚೇತನ್ ದೊರೆರಾಜು, ಸೋಮಣ್ಣ ಹಾಗೂ ಇನ್ನಿತರರು ಇದ್ದರು.