ಜಿಲ್ಲೆ

ವಕ್ಕನದುರ್ಗದಿಂದ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆ ನಾಳೆ: ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿಕೆ

ಹನುಮಸಾಗರ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು. ಪಟ್ಟಣದ ಎಪಿಎಂಸಿ ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಕುಷ್ಟಗಿ ತಾಲೂಕಿನ ಗಡಿಭಾಗ ವಕ್ಕನದುರ್ಗಾ ಗ್ರಾಮದಿಂದ ಆ.28 ರಂದು ಬೆಳಗ್ಗೆ 10 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ.

ನಿಲೋಗಲ್, ಬಿಳೆಕಲ್, ಹನಮನಾಳ ಮಾರ್ಗವಾಗಿ ಜಹಗೀರಗುಡದೂರು ಗ್ರಾಮದಲ್ಲಿ ಮೊದಲ ದಿನದ ಪಾದಯಾತ್ರೆ ಮುಗಿಯುತ್ತಿದೆ. ಎರಡನೇ ದಿನ ಆ.29 ರಂದು ಜಹಗೀರಗುಡದೂರು ಗ್ರಾಮದಿಂದ ಆರಂಭವಾಗಿ ಬಾದಿಮನಾಳ ಗ್ರಾಮದ ಮುಖಾಂತರ ಹನುಮಸಾಗರದಲ್ಲಿ ಅಂತ್ಯಗೊಳ್ಳಲಿದೆ. ನಂತರ ಡಾ.ಅಂಬೇಡ್ಕರ ವೃತ್ತದಲ್ಲಿ ಸಂಜೆ 4 ಗಂಟೆಗೆ ಬಹಿರಂಗ ಸಭೆ ನಡೆಯಲಿದೆ ಎಂದರು. ಮಾಜಿ ಶಾಸಕ ಹಸನಸಾಬ್ ದೋಟಿಹಾಳ, ಕಾಂಗ್ರೆಸ್‌ನ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಾಲತಿ ನಾಯಕ, ಮುಖಂಡರಾದ ಶೇಖರಗೌಡ ಮಾಲಿಪಾಟೀಲ್, ಶಿವಶಂಕರಗೌಡ ಪಾಟೀಲ್, ಸಂಗಯ್ಯ ವಸ್ತ್ರದ, ಮಹಾಂತೇಶ ಅಗಸಿಮುಂದಿನ, ಸೋಮಶೇಖರ ವೈಜಾಪುರ, ಮುತ್ತಣ್ಣ ಕರಡಿ, ವಿಶ್ವನಾಥ ಕನ್ನೂರು, ಪ್ರಶಾಂತ ಗಡಾದ, ಸುರೇಶ ಕುಂಟನಗೌಡ್ರ, ಶರಣಪ್ಪ ಅಮರಾವತಿ, ಅಬ್ದುಲ್ ರಜಾರಕ್ ಟೇಲರ್ ಇತರರಿದ್ದರು.