ತುಮರಿಕೊಪ್ಪ ಗ್ರಾಪಂಗೆ ಆಯ್ಕೆಯಾದ ಅಧ್ಯಕ್ಷ ಹನುಮಂತ ಮೂಗನೂರು, ಉಪಾಧ್ಯಕ್ಷ ಮಹಾಂತೇಶ ಮಾದರ ಕಾಂಗ್ರೆಸ್ ಬೆಂಬಲಿತ ಸದಸ್ಯರೊಂದಿಗೆ ವಿಜಯೋತ್ಸವ ಆಚರಿಸಿದರು. 
ಜಿಲ್ಲೆ

ತುಮರಿಕೊಪ್ಪ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ: ಕೈ ಬೆಂಬಲದೊಂದಿಗೆ ಬಿಜೆಪಿ ಸದಸ್ಯರು ಆಯ್ಕೆ

ಹನುಮಸಾಗರ: ಸಮೀಪದ ತುಮರಿಕೊಪ್ಪ ಗ್ರಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಬಿಜೆಪಿ ಬೆಂಬಲಿತ ಹನುಮಂತ ನಾಗಪ್ಪ ಮೂಗನೂರು, ಮಹಾಂತೇಶ ಮಾದರ ಆಯ್ಕೆಯಾದರು.

ಒಟ್ಟು 14 ಸದಸ್ಯರನೊಳಗೊಂಡ ತುಮರಿಕೊಪ್ಪ ಗ್ರಾಪಂನಲ್ಲಿ 9 ಜನ ಬಿಜೆಪಿ ಬೆಂಬಲಿತರು, 5 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಹಿಂದೆ ಅಧ್ಯಕ್ಷ-ಉಪಾಧ್ಯಕ್ಷರಾಗಿದ್ದ ಬಿಜೆಪಿಯ ಮುತ್ತಪ್ಪ ಪರಸಾಪುರ ಹಾಗೂ ಅಶೋಕ ವಾಲೀಕಾರ್ ರಾಜೀನಾಮೆಯಿಂದ ಎರಡೂ ಸ್ಥಾನಗಳು ತೆರವಾಗಿದ್ದವು. ಮಂಗಳವಾರ ತಹಸೀಲ್ದಾರ್ ಎಂ. ಸಿದ್ದೇಶ ನೇತೃತ್ವದಲ್ಲಿ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾದ ಹನುಮಂತ ಮೂಗನೂರು, ಮಹಾಂತೇಶ ಪೂಜಾರ್, ಉಪಾಧ್ಯಕ್ಷ ಸ್ಥಾನಕ್ಕೆ ಮಹಾಂತೇಶ ಭರಮಪ್ಪ ಮಾದರ ಹಾಗೂ ಸುಶೀಲವ್ವ ಮಾಗಿ ಸ್ಪರ್ಧಿಸಿದ್ದರು. ಇದರಿಂದಾಗಿ ತೀವ್ರ ಕುತೂಹಲ ಕೆರಳಿಸಿತ್ತು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹನಮಂತ ಮೂಗನೂರು, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಾಂತೇಶ ಭರಮಪ್ಪ ಮಾದರ ತಲಾ 9 ಮತ ಪಡೆದು ಆಯ್ಕೆಯಾದರು. ಮಹಾಂತೇಶ ಪೂಜಾರ ಹಾಗೂ ಸುಶೀಲವ್ವ ಮಾಗಿ ತಲಾ 5 ಸ್ಥಾನ ಪಡೆದರು. ಬಳಿಕ ಅಧ್ಯಕ್ಷ-ಉಪಾಧ್ಯಕ್ಷರು ಕಾಂಗ್ರೆಸ್ ಬೆಂಬಲಿತ ಸದಸ್ಯರೊಂದಿಗೆ ವಿಜಯೋತ್ಸವ ಆಚರಿಸಿದರು.