ಹನುಮಸಾಗರದ ಬಸ್ ನಿಲ್ದಾಣದಲ್ಲಿ ಇಳಕಲ್‌ಗೆ ಬಸ್ ಬಿಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪಿಎಸ್‌ಐ ಧನಂಜಯ ಹಿರೇಮಠಗೆ ಗುರುವಾರ ಮನವಿ ಸಲ್ಲಿಸಿದರು. ಕಾನ್‌ಸ್ಟೇಬಲ್ ಮುತ್ತಣ್ಣ, ವಿದ್ಯಾರ್ಥಿಗಳಾದ ಪ್ರವೀಣ ಕುಮಾರ, ಮಲ್ಲಿಕಾರ್ಜುನ, ತಿಪ್ಪಣ್ಣ, ನಾಗರಾಜ, ಪಲ್ಲವಿ ಇತರರಿದ್ದರು.  
ಜಿಲ್ಲೆ

ಕಾಲೇಜು ಸಮಯಕ್ಕೆ ಬಸ್ ಬಿಡಿ, ಹನುಮಸಾಗರದಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕುರುವತ್ತಿ ಶ್ರೀಕಾಂತಪ್ಪ

ಹನುಮಸಾಗರ: ಪಟ್ಟಣದಿಂದ ಇಳಕಲ್‌ಗೆ ಸಾರಿಗೆ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬಸ್‌ಗಳ ಸಂಚಾರ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.

ಕಾಲೇಜಿಗೆ ತೆರಳಲು ಸರಿಯಾಗಿ ಬಸ್‌ಗಳ ವ್ಯವಸ್ಥೆ ಇಲ್ಲದೆ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಸಕಾಲಕ್ಕೆ ಬಸ್‌ಗಳನ್ನು ಬಿಡುವಂತೆ ಇಳಕಲ್ ಹಾಗೂ ಗಜೇಂದ್ರಗಡ ಡಿಪೋ ವ್ಯವಸ್ಥಾಪಕರಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ನಾವು ಹೊಸದಾಗಿ ಬಸ್ ಬಿಡಿ ಎನ್ನುತ್ತಿಲ್ಲ.

ಬಸ್ ನಿಲ್ದಾಣದ ವೇಳಾಪಟ್ಟಿ ಪ್ರಕಾರ ಇಳಕಲ್ ಪಟ್ಟಣಕ್ಕೆ ತೆರಳಲು ಬೆಳಗ್ಗೆ 7 ರಿಂದ 9.30ವರೆಗೆ ಬಸ್‌ಗಳು ಬರಬೇಕು. ಆದರೆ ಈ ಸಮಯಕ್ಕೆ ಬರುತ್ತಿಲ್ಲ. ಇದರಿಂದ ಕಾಲೇಜಿಗೆ ಹೋಗಲು ತುಂಬಾ ತೊಂದರೆ ಆಗುತ್ತಿದ್ದು, ನಿತ್ಯವೂ ತರಗತಿಗೆ ಗೈರಾಗುವುದು ಅನಿವಾರ್ಯವಾಗಿದೆ. ಕೂಡಲೇ ಸಮಸ್ಯೆ ಸರಿಪಡಿಸಬೇಕೆಂದು ವಿದ್ಯಾರ್ಥಿಗಳಾದ ಪ್ರವೀಣ ಕುಮಾರ, ಮಲ್ಲಿಕಾರ್ಜುನ, ತಿಪ್ಪಣ್ಣ, ನಾಗರಾಜ, ಪಲ್ಲವಿ, ಪವಿತ್ರಾ, ಭೀಮವ್ವ, ಸ್ವಪ್ನಾ ಇತರರು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಧನಂಜಯ ಹಿರೇಮಠ, ವಿದ್ಯಾರ್ಥಿಗಳಿಂದ ಮನವಿ ಸ್ವೀಕರಿಸಿ, ಇಳಕಲ್, ಗಜೇಂದ್ರಗಡ ಹಾಗೂ ಕುಷ್ಟಗಿ ಡಿಪೋ ವ್ಯವಸ್ಥಾಪಕರಿಗೆ ವಿಷಯ ತಿಳಿಸಿ ಬಸ್ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ ಬಳಿಕ ಪ್ರತಿಭಟನೆ ಹಿಂಡೆದರು.

ವಿದ್ಯಾರ್ಥಿಗಳು ಹೊಸದಾಗಿ ಬಸ್ಸುಗಳನ್ನು ಬಿಡಿ ಎಂದು ಕೇಳುತ್ತಿಲ್ಲ. ಈ ಹಿಂದೆ ಓಡಾಡುತ್ತಿದ್ದ ಬಸ್ಸುಗಳನ್ನು ಸರಿಯಾದ ಸಮಯಕ್ಕೆ ಬಿಡಿ ಎಂದು ಕೇಳುತ್ತಿದ್ದಾರೆ. ಈ ಬಗ್ಗೆ ಗಜೇಂದ್ರಗಡ ಹಾಗೂ ಇಳಕಲ್ ಡಿಪೋ ವ್ಯವಸ್ಥಾಪಕ ಜತೆ ಮಾತನಾಡಿದ್ದು, ಪತ್ರ ವ್ಯವಹಾರ ಮಾಡಲಾಗುವುದು.

ಸುಂದರಗೌಡ

ಡಿಪೋ ವ್ಯವಸ್ಥಾಪಕ, ಕುಷ್ಟಗಿ