ಹನುಮಸಾಗರದ ಕರ್ನಾಟಕ ಪಬ್ಲಿಕ್ ಶಾಲೆಯ ಹೊರನೋಟ. 
ಜಿಲ್ಲೆ

ಸರ್ಕಾರಿ ಶಾಲೆಗೆ ದಾಖಲಿಸಲು ಹಿಂದೇಟು

ಶ್ರೀನಾಥ

ಹನುಮಸಾಗರ: ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಬಾಲಕರ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತಗೊಳ್ಳುತ್ತಿದ್ದು, ಪಾಲಕರು ಮಕ್ಕಳನು ದಾಖಲಿಸಲು ಹಿಂದೇಟು ಹಾಕುವಂತಾಗಿದೆ.

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿ, ಅಗತ್ಯ ಸೌಕರ್ಯಗಳನ್ನು ನೀಡುತ್ತಿದೆ. ಆದರೆ, ಈ ಸೌಕರ್ಯಗಳು ಕೈಗೂಡದೇ ಇಲ್ಲಿನ ಬಾಲಕರ ಸರ್ಕಾರಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.50 ಸಹ ಬರುತ್ತಿಲ್ಲ.

ಹೀಗಾಗಿ ಸಮರ್ಥರಿರುವ ಪಾಲಕರು ಹೈಸ್ಕೂಲ್ ಶಿಕ್ಷಣಕ್ಕೆ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸಲು ಮುಂದಾಗಿದ್ದಾರೆ. ಇನ್ನು ಬಡವರಿಗಂತೂ ಸರ್ಕಾರಿ ಶಾಲೆ ಅನಿವಾರ್ಯವಾಗಿದೆ.

ಬಾಲಕೀಯರೇ ಮೈಲುಗೈ: ಹನುಮಸಾಗರದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಒಂದೇ ಆವರಣದಲ್ಲಿ ಬಾಲಕಿಯರ ಮತ್ತು ಬಾಲಕರ ಸರ್ಕಾರಿ ಪ್ರೌಢಶಾಲೆಗಳಿವೆ.

ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಪ್ರಸಕ್ತ ಸಾಲಿನಲ್ಲಿ ಶೇ.57.80 ವಿದ್ಯಾರ್ಥಿನಿಯರು ಉತ್ತೀರ್ಣರಾದರೆ, ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶೇ.29.41 ವಿದ್ಯಾರ್ಥಿಗಳು ಮಾತ್ರ ಪಾಸಾಗಿದ್ದಾರೆ. ಶಾಲೆಯಲ್ಲಿ ಸಂಪನ್ಮೂಲ ಶಿಕ್ಷಕರಿದ್ದರೂ ವಿದ್ಯಾರ್ಥಿಗಳ ಫಲಿತಾಂಶ ಕುಸಿತಕ್ಕೆ ಅಸಲಿ ಕಾರಣವೇನೆಂಬುದನ್ನು ಶಿಕ್ಷಕರು ಹಾಗೂ ಇಲಾಖೆ ಕಂಡುಕೊಳ್ಳಬೇಕಿದೆ.

ಶಾಲೆಯಲ್ಲಿದ್ದಾರೆ ಸಂಪನ್ಮೂಲ ಶಿಕ್ಷಕರು : ಈ ಶಾಲೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 10 ಜನ ಕಾಯಂ ಹಾಗೂ ಮೂವರು ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸಿದ್ದಾರೆ.

ಪ್ರತಿ ವಿಷಯಕ್ಕೆ ಇಬ್ಬರು ಬೋಧಕರಿದ್ದು, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿದ್ದಾರೆ. ವಿಷಯವಾರು ಪಠ್ಯಕ್ರಮ ರಚನೆ, ಫಲಿತಾಂಶಗಳ ಸುಧಾರಣೆಗೆ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ವಿಷಯ ಮಂಡಿಸುವುದು ಸೇರಿ ಶಿಕ್ಷಣ ಇಲಾಖೆಯ ನಾನಾ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ.

ಆದರೆ, 2024-25 ನೇ ಶೈಕ್ಷಣಿಕ ಸಾಲಿನಲ್ಲಿ 136 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ಮಾತ್ರ ಎಸ್ಸೆಸ್ಸೆಲ್ಸಿ ಪಾಸಾಗಿದ್ದಾರೆ.

ನಾನಾ ಕಾರ್ಯಕ್ರಮಗಳ ವೈಫಲ್ಯ

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯಿಂದ ಕಳೆದ ವರ್ಷ ಜಾರಿಯಾದ ವೆಬ್‌ಕಾಸ್ಟಿಂಗ್‌ನಿಂದ ವಿವಿಧ ಬದಲಾವಣೆಗೆ ಕಾರಣವಾಗಿದೆ. ಫಲಿತಾಂಶ ಸುಧಾರಣೆಗೆ ಶಿಕ್ಷಕರು ವಿದ್ಯಾರ್ಥಿಗಳ ಮನೆ-ಮನೆಗೆ ಭೇಟಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸ ಪರಿಶೀಲನೆ, ಬೆಳಗಿನ ಜಾವ ಹಾಗೂ ರಾತ್ರಿ ಮಕ್ಕಳಿಗೆ ಓದುವಂತೆ ಹೇಳಲು ಪಾಲಕರಿಗೆ ದೂರವಾಣಿ ಕರೆ ಮಾಡಿ ತಿಳಿಸುವುದು. ಶಿಕ್ಷಕರು ವಿದ್ಯಾರ್ಥಿಗಳನ್ನು ದತ್ತು ಪಡೆಯುವುದು, ವಿಶೇಷ ತರಗತಿ ಆಯೋಜನೆ, ವಾರಕ್ಕೊಂದು ವಿಷಯವಾರು ಕಿರು ಪರೀಕ್ಷೆ, ವೈಯಕ್ತಿಕ ಕಲಿಕೆಗೆ ಆಸರೆ ಪುಸ್ತಕ ನೀಡುವುದು ಸೇರಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದರೂ, ವೈಫಲ್ಯಗೊಂಡು ನಿರೀಕ್ಷಿತ ಫಲಿತಾಂಶ ಬರುತ್ತಿಲ್ಲ. ಇದರಿಂದ ಪಾಲಕರಿಗೆ ತಲೆನೋವಾಗಿದೆ.

ಕೋಟ್: ನಾವು ಬಡವರಿದ್ದೇವೆ. ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸುವ ಶಕ್ತಿ ನಮಗಿಲ್ಲ. ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆಂದು ಸರ್ಕಾರ ಜಾಹೀರಾತು ನೀಡುತ್ತದೆ. ಆದರೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನನ್ನ ಮಗ ಫೇಲ್ ಆಗಿದ್ದಾನೆ. ಗುಣಮಟ್ಟದ ಶಿಕ್ಷಣ ಸಿಕ್ಕಿದ್ದರೆ ನನ್ನ ಮಗ ಯಾಕೆ ಫೇಲ್ ಆಗುತ್ತಿದ್ದ ? ಮಕ್ಕಳಿಗೆ ಶಿಕ್ಷಕರು ಸೂಕ್ತ ಬೋಧನೆ ಮಾಡುತ್ತಿಲ್ಲ ಎಂಬುದು ಫಲಿತಾಂಶದಲ್ಲಿಯೇ ತಿಳಿಯುತ್ತದೆ. ಏನಾದರೂ ಕೇಳಿದರೆ ನಿಮ್ಮ ಮಗ ಫೇಲ್ ಆಗಿದ್ದಕ್ಕೆ ಕೇಳುತ್ತಿರಾ ಎನ್ನುತ್ತಾರೆ. ಸದ್ಯ ನನ್ನ ಮಗನ ಭವಿಷ್ಯ ಮಾತ್ರ ಹಾಳಾಗಿದೆ.

ಹೆಸರೇಳಲಿಚ್ಛಿಸದ ಪಾಲಕ, ಹನುಮಸಾಗರ

ಕೋಟ್: ಗ್ರಾಪಂನಿಂದ ಶಾಲೆಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಆದರೂ, ಫಲಿತಾಂಶ ಸುಧಾರಿಸುತ್ತಿಲ್ಲ. ಪ್ರೌಢ ಶಾಲೆಗೆ ದಾಖಲಾತಿ ಪಡೆದ ಪ್ರಾರಂಭದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪುನರಾವರ್ತನೆ ಮಾಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಪಾಲಕರ ಸಭೆ ಕರೆದು, ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲಿಸಬೇಕು. ಫಲಿತಾಂಶ ಸುಧಾರಣೆ ಮಾಡುವಲ್ಲಿ ಶಿಕ್ಷಕರು ಸಂಪೂರ್ಣ ವಿಫಲರಾಗಿದ್ದಾರೆ.

ರುದ್ರಗೌಡ ಗೌಡಪ್ಪನವರ, ಅಧ್ಯಕ್ಷ, ಗ್ರಾಪಂ ಹನುಮಸಾಗರ

ಕೋಟ್: ಹನುಮಸಾಗರದ ಬಾಲಕಯರ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸರಿಯಾಗಿ ಶಾಲೆಗೆ ಬರುವುದಿಲ್ಲ. ಹೇಳಿದ ಕೆಲಸ ಸರಿಯಾಗಿ ಮಾಡುವುದಿಲ್ಲ. ಬಹಳ ವಿದ್ಯಾರ್ಥಿಗಳು ಬೇರೆ ಊರುಗಳಿಂದ ಬರುತ್ತಾರೆ. ಅವರಿಗೆ ಬಸ್ ಸೌಕರ್ಯ. ಸರಿಯಾದ ಸಮಯಕ್ಕೆ ಹಾಸ್ಟೆಲ್ ಓಪನ್ ಆಗದಿರುವ ಸಮಸ್ಯೆ ಮಕ್ಕಳಿಗೆ ಇದೆ. ಫಲಿತಾಂಶ ಕಡಿಮೆ ಬಂದ ಬಗ್ಗೆ ಆ ಶಾಲೆಗೆ ನೋಟಿಸ್ ನೀಡಲಾಗಿದೆ.

ಸುರೇಂದ್ರ ಕಾಂಬಳೆ, ಬಿಇಒ ಕುಷ್ಟಗಿ