ಜಿಲ್ಲೆ

ಉತ್ತಮ ಆರೋಗ್ಯಕ್ಕಾಗಿ ಪರಿಸರ ಉಳಿಸಿ

ಪ್ರವೀಣ ಉದುಸಾ ದಲಬಂಜನ್

ಹನುಮಸಾಗರ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಪ್ರಗತಿಪರ ರೈತ ಸಿರಾಜುದ್ದೀನ್ ಮೂಲಿಮನಿ ಹೇಳಿದರು.

ಪಟ್ಟಣದ ಸಜ್ಜನರ ಕಾಲನಿಯಲ್ಲಿ ಬುಧವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹನುಮಸಾಗರ ವಲಯ ಮಟ್ಟದ ಕಾರ್ಯಕ್ಷೇತ್ರ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಿಡ ಮರಗಳಿಂದ ಶುದ್ಧ ಗಾಳಿ, ಕಾಲ ಕಾಲಕ್ಕೆ ಸರಿಯಾಗಿ ಮಳೆ ಆಗುತ್ತದೆ. ಆದರೆ, ಇಂದು ಮನುಷ್ಯ ತನ್ನ ಅನುಕೂಲಕ್ಕಾಗಿ ಗಿಡ ಮರಗಳನ್ನು ಕಡಿದು ನಾಶ ಮಾಡುತ್ತಿದ್ದಾನೆ. ಇದರಿಂದ ಮುಂಬರುವ ದಿನಗಳಲ್ಲಿ ಬಹಳಷ್ಟು ತೊಂದರೆ ಎದುರಿಸಬೇಕಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಪರಿಸರ ಉಳಿಸಬೇಕಾಗಿದೆ. ಸುತ್ತಮುತ್ತಲಿನ ವಾತಾವರಣವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ಮಾಡಬಾರದು. ಎಲ್ಲರೂ ಗಿಡ ಮರಗಳನ್ನು ಬೆಳೆಸಬೇಕು ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕೃಷಿ ಮೇಲ್ವಿಚಾರಕ ರವಿಚಂದ್ರ, ವಲಯ ಮೇಲ್ವಿಚಾರಕಿ ನಂದಾ, ಸೇವಾಪ್ರತಿನಿಧಿ ಮಂಜುಳಾ, ಒಕ್ಕೂಟಗಳ ಅಧ್ಯಕ್ಷೆ ಲಕ್ಷ್ಮೀ ಈರಪ್ಪ ಪತ್ತಾರ, ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.