ಹನುಮಸಾಗರ: ಸಮೀಪದ ಹಿರೇಗೊಣ್ಣಾಗರ ಗ್ರಾಮದಲ್ಲಿ ನಂದಿಬಸವೇಶ್ವರ 31ನೇ ಜಾತ್ರಾ ಮಹೋತ್ಸವದ ನಿಮಿತ್ತ ಶನಿವಾರ ಸಂಜೆ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆಯಿಂದ ದೇವಸ್ಥಾನದಲ್ಲಿ ಹೋಮ, ಹವನ, ಪಂಚಾಮೃತ, ನೈವೇದ್ಯ, ಕುಂಕುಮಾರ್ಚನೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ಗ್ರಾಮದ ಶಿವಾನಂದ ಆಲ್ಲೂರು ಅವರ ಮನೆಯಿಂದ ಕಳಸ, ಗುಂಡಪ್ಪ ಬಸಪ್ಪ ಕುಂಬಾರ ಅವರ ಮನೆಯಿಂದ ಹಗ್ಗದ ಮೆರವಣಿಗೆ ಸಕಲ ವಾದ್ಯ ವೈಭವಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು. ನಂತರ ಮೆರವಣಿಗೆ ದೇವಸ್ಥಾನ ತಲುಪಿತು. ಸಂಜೆ ರಥೋತ್ಸವ ಜರುಗಿತು.
ಹಾಬಲಕಟ್ಟಿ, ತುಮರಿಕೊಪ್ಪ, ಬಾದಿಮನಾಳ, ಚಿಕ್ಕಗೊಣ್ಣಾಗರ, ವಾರಿಕಲ್, ನರಸಾಪೂರ, ಗಡಚಿಂತಿ ಸೇರಿ ವಿವಿಧ ಗ್ರಾಮಗಳ ನೂರಾರು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.