ಹನುಮಸಾಗರ: ಆರೋಗ್ಯದಿಂದಿರಲು ವ್ಯಾಯಾಮ ಮತ್ತು ಯೋಗ ಮಾಡಬೇಕು ಎಂದು ಕುಷ್ಟಗಿ ಆಯುಷ್ ವೈದ್ಯೆ ವಿಜಯಲಕ್ಷ್ಮೀ ಮೆಹರವಾಡೆ ಹೇಳಿದರು.
ಸಮೀಪದ ತಳುವಗೇರಾ ಗ್ರಾಮದಲ್ಲಿ ಜಿಲ್ಲಾ ಆಯುಷ್ ಇಲಾಖೆ, ಸರ್ಕಾರಿ ಹೋಮಿಯೋಪಥಿ ಚಿಕಿತ್ಸಾಲಯ ಕುಷ್ಟಗಿ ಹಾಗೂ ಚಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನದಡಿ ಬುಧವಾರ ಹಮ್ಮಿಕೊಂಡ ವಯೋಮಿತ್ರ ಆಯುಷ್ ಅರಿವು ಮತ್ತು ಚಿಕಿತ್ಸಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯದ ರಾಮಬಾಣವಾಗಿರುವ ಆಯುರ್ವೇದ, ಯೋಗ ಮತ್ತು ಹೋಮಿಯೋಪಥಿ, ಯುನಾನಿ ವೈದ್ಯಕೀಯ ಪದ್ಧತಿಗಳು ನಮ್ಮ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗಗಳಾಗಿವೆ. ಸಾರ್ವಜನಿಕರ ಆರೋಗ್ಯಕ್ಕಾಗಿ ಆಯುಷ್ ಇಲಾಖೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಮನೆಯಲ್ಲಿರುವ ಶುಂಠಿ, ಮೆಣಸು, ತುಳಸಿ, ದೊಡ್ಡಪತ್ರೆ, ಅರಿಶಿನ, ತುಂಬೆ ಸೇರಿ ವಿವಿಧ ಪದಾರ್ಥಗಳಲ್ಲಿ ಔಷಧ ಗುಣಗಳಿದ್ದು, ಮಿತವಾಗಿ ಬಳಕೆ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳಬಹುದು ಎಂದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ರೇಣುಕಾ ಗುರುವಿನ, ಸಮುದಾಯ ಆರೋಗ್ಯ ಅಧಿಕಾರಿ ಶರಣಪ್ಪ ಪೊಲೀಸ್ ಪಾಟೀಲ್, ಫಾರ್ಮಸಿ ಅಧಿಕಾರಿ ಸುಧಾಕರ ಇತರರಿದ್ದರು.