ಜಿಲ್ಲೆ

11 ವರ್ಷದ ಬಳಿಕ ತುಂಬಿದ ಪಟ್ಟಣದ ಕೆರೆ, ಕೊಳವೆ ಬಾವಿಗಳಿಗೆ ಮರುಜೀವ

ಹನುಮಸಾಗರ: ಪಟ್ಟಣದ ಅಭಿನವ ತಿರುಪತಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಗುಡ್ಡಕ್ಕೆ ಹೊಂದಿಕೊಂಡಿರುವ ಕೆರೆ 11 ವರ್ಷಗಳ ಬಳಿಕ ಭರ್ತಿಯಾಗಿದ್ದು, ಪಟ್ಟಣದ ಕೊಳವೆ ಬಾವಿಗಳಿಗೆ ಮರುಜೀವ ಬಂದಿದೆ.

2009ರಲ್ಲಿ ತುಂಬಿದ್ದ ಕೆರೆ ಈಗ ಭರ್ತಿಯಾಗಿದೆ. ಕೆರೆಯ ಹೂಳು ತಗೆದಿದ್ದು, ಹಿಂದಿಗಿಂತ 15 ಅಡಿಗೂ ಹೆಚ್ಚು ಕೆರೆ ಹಾಳವಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಕೆರೆ ತುಂಬಿ ಕೋಡಿಯಲ್ಲಿ ನೀರು ಹರಿಯುತ್ತಿದೆ. ಕೆರೆ ತುಂಬಿದ್ದರಿಂದ ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರಿನ ಸೆಲೆಗಳು ಬಂದಿದ್ದು, ಕೊಳವೆ ಬಾವಿಯಲ್ಲಿ ನೀರು ಬೀಳುವ ಸದ್ದು ಕೇಳುತ್ತಿದೆ. ಸಾರ್ವಜನಿಕರಿಗೆ ನೀರು ಒದಗಿಸಲು ಪಟ್ಟಣದಲ್ಲಿ ಹಿಂದೆ 41 ಕೊಳವೆಬಾವಿಗಳನ್ನು ಕೊರೆಸಲಾಗಿತ್ತು, ಅವುಗಳಲ್ಲಿ 13ಕ್ಕೂ ಹೆಚ್ಚು ನೀರಿಲ್ಲದೆ ಬಂದ್ ಆಗಿದ್ದವು.

ಉಳಿದವುಗಳಲ್ಲಿ ಸ್ವಲ್ಪ ಪ್ರಮಾಣದ ನೀರು ಬರುತ್ತಿದ್ದರಿಂದ ಖಾಸಗಿಯವರಿಂದ 9 ಕೊಳವೆಬಾವಿಗಳನ್ನು ಬಾಡಿಗೆ ಪಡೆದು ಸಾರ್ವಜನಿಕರಿಗೆ ನೀರು ಒದಗಿಸಲು ಗ್ರಾಪಂನವರು ಹರಸಾಹಸ ಪಡುತ್ತಿದ್ದರು. ಸದ್ಯ ನೀರಿನ ಸೆಲೆ ಬಂದಿದ್ದರಿಂದ ಬಾಡಿಗೆ ಕೊಳವೆ ಬಾವಿಗಳನ್ನು ಬಿಟ್ಟು ಗ್ರಾಪಂನ ಬೋರ್‌ವೆಲ್‌ನಿಂದ ಸಾರ್ವಜನಿಕರಿಗೆ ನೀರು ಒದಗಿಸಲು ಗ್ರಾಪಂ ಆಡಳಿತ ಮುಂದಾಗಿದೆ.

ಕೆರೆ ತುಂಬಿ ಅಂತರ್ಜಲ ಮಟ್ಟ ಹೆಚ್ಚಿದ್ದರಿಂದ ನೀರಗಂಟಿಗಳ (ವಾಟರ್‌ಮ್ಯಾನ್) ಸಭೆ ನಡೆಸಿ 9 ಬಾಡಿಗೆ ಕೊಳವೆ ಬಾವಿಯಲ್ಲಿ 7 ಕೈಬಿಡಲು ತೀರ್ಮಾನಿಸಲಾಗಿದೆ. 4 ಕೊಳವೆ ಬಾವಿಗಳಿಗೆ ಸಾಮಗ್ರಿಗಳ ಅವಶ್ಯಕತೆ ಇದ್ದು, ಸದ್ಯದಲ್ಲೇ ವ್ಯವಸ್ಥೆ ಮಾಡಿ. ಎಲ್ಲ ಬೋರ್‌ವೆಲ್ ಪ್ರಾರಂಭಿಸಲಾಗುವುದು. | ನಿಂಗಪ್ಪ ಮೂಲಿಮನಿ, ಪಿಡಿಒ ಹನುಮಸಾಗರ ಗ್ರಾಪಂ