ಜಿಲ್ಲೆ

ಹನುಮಂತನಗರದ ಕುಮಾರಸ್ವಾಮಿ ದೇಗುಲದಲ್ಲಿ ವ್ಯೂ ಪಾಯಿಂಟ್ ಕಾಮಗಾರಿ ಸ್ಥಗಿತ

ಪಂಕಜ ಕೆ.ಎಂ.

ಬೆಂಗಳೂರು: ಸಾರ್ವಜನಿಕರು ಹಾಗೂ ಹೋರಾಟಗಾರರ ವಿರೋಧದಿಂದಾಗಿ ದೇವಸ್ಥಾನದ ಗೋಪುರಕ್ಕೆ ಅಡ್ಡಲಾಗಿ ಕೈಗೊಂಡಿದ್ದ ವ್ಯೂ ಪಾಯಿಂಟ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡಿದೆ. ಬಸವನಗುಡಿಯ ಹನುಮಂತನಗರದ ಪುರಾಣ ಪ್ರಸಿದ್ಧ ಶ್ರೀ ಕುಮಾರಸ್ವಾಮಿ ದೇವಸ್ಥಾನ ಆವರಣದಲ್ಲಿ ಗೋಪುರಕ್ಕೆ ಅಡ್ಡಲಾಗಿ ‘ವ್ಯೂಪಾಯಿಂಟ್’ ನಿರ್ಮಿಸಲು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ (ಮಾ. 9ರಂದು) ಯೋಜನೆ ಚಾಲನೆಗೊಂಡಿತ್ತು. ಆಗಲೂ ಸ್ಥಳೀಯರು ಹಾಗೂ ಭಕ್ತರಿಂದ ವಿರೋಧ ವ್ಯಕ್ತವಾಗಿತ್ತು.

ಸಾರ್ವತ್ರಿಕ ಚುನಾವಣೆ ಸಮೀಪವಿದ್ದ ಕಾರಣ ಕೆಲಸ ನಿಲ್ಲಿಸಿದ ಹಾಗೆ ಮಾಡಿ, ಈಗ ಮತ್ತೆ ಆರಂಭಿಸಿದ್ದಾರೆ. ಇದು ಧಾರ್ಮಿಕ ಭಾವನೆ ಹಾಗೂ ಪರಂಪರೆಗೆ ವಿರುದ್ಧವಾದ ನಿರ್ಧಾರವಾಗಿದೆ ಎಂದು ಕಾಂಗ್ರೆಸ್ ವಕ್ತಾರ ಡಾ. ಶಂಕರ್ ಗುಹಾ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ನಿಲ್ಲಿಸುವಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಮಾಡಿತು. ಈ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

ವ್ಯೂ ಪಾಯಿಂಟ್ ನಿರ್ಮಾಣ ಮತ್ತು ಉದ್ಯಾನದಿಂದಾಗಿ ಪವಿತ್ರ ಧಾರ್ಮಿಕ ಕ್ಷೇತ್ರದ ಪರಿಕಲ್ಪನೆ ಬದಲಾಗಲಿದೆ. ಕುಮಾರಸ್ವಾಮಿ ಉದ್ಯಾನ ಪ್ರೇಮಿಗಳ ತಾಣವಾಗಿ ಬದಲಾಗುತ್ತಿದೆ. ಮೋಜು ಮಸ್ತಿ ಮಾಡುವ ಪ್ರವಾಸಿ ತಾಣದಂತಾಗಿದೆ. ಮುಂಜಾನೆ ವ್ಯಾಯಾಮ ಮಾಡಲು ಬರುವವರು ಶೂ, ಚಪ್ಪಲಿ ಹಾಕಿಕೊಂಡು ದೇವಾಲಯದ ಸುತ್ತಲೂ ಓಡಾಡುತ್ತಾರೆ. ಇದು ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಿದೆ. ಇನ್ನು ವ್ಯೂ ಪಾಯಿಂಟ್‌ನಿಂದ ದೇವಾಲಯದ ಪಾವಿತ್ರ್ಯತೆ ಮತ್ತಷ್ಟು ಹಾಳಾಗಲಿದೆ ಎಂದು ಕಳವಳ ವ್ಯಕ್ತಪಡಿಸಿತು.

ಕಾಮಗಾರಿ ನಡೆಸಲು ಬಂದ ವಾಹನ ಹಾಗೂ ಸಲಕರಣೆಗಳನ್ನು ದೇವಸ್ಥಾನದ ಆವರಣದಿಂದ ಹೊರಹಾಕಲಾಗಿದೆ. ಮುಂದೆ ಭಕ್ತಾದಿಗಳ ಅಪೇಕ್ಷೆ ಮೇರೆಗೆ ಅಲ್ಲಿ ಧ್ಯಾನ ಮಂಟಪ ಅಥವಾ ಸಮುದಾಯ ಭವನ ನಿರ್ಮಿಸಲು ಚರ್ಚಿಸಲಾಗುವುದು. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಲಾಗುವುದು.
- ಡಾ. ಶಂಕರ್ ಗುಹಾ, ಕಾಂಗ್ರೆಸ್ ವಕ್ತಾರ