ಹನುಮಸಾಗರ: ಜಿಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಪಕ್ಷದ ಸದಸ್ಯರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದೆಂದು ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಹಳ್ಳೂರು ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿ ತನ್ನದೇಯಾದ ತತ್ವ-ಸಿದ್ಧಾಂತ, ದೇಶಭಕ್ತಿ, ಪಕ್ಷದ ಅಭಿಮಾನ, ಪಕ್ಷದ ಮುಖಂಡರ ಹಾಗೂ ಪಕ್ಷ ನೀಡುವ ಆದೇಶ ಮತ್ತು ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಅದರಂತೆ ನಡೆದುಕೊಂಡು ಹೋಗುವುದು ನಮ್ಮ ಕರ್ತವ್ಯ. ಆದರೆ, ಇತ್ತೀಚೆಗೆ ನಡೆದ ಜಿಪಂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ನಿಯಮ ಉಲ್ಲಂಘಿಸಿ ಕುಷ್ಟಗಿ ತಾಲೂಕಿನ ಕೆಲ ಸದಸ್ಯರು ಅಡ್ಡ ಮತದಾನ ಮಾಡಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಬಿಜೆಪಿ ಜಿಲ್ಲಾಧ್ಯಕ್ಷರಾದ ದೊಡ್ಡನಗೌಡ ಎಚ್.ಪಾಟೀಲ್ ಅವರು ಅಡ್ಡ ಮತದಾನ ಮಾಡಿದ ಸದಸ್ಯರ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಆದೇಶಿಸಿದ್ದು. ಜಿಲ್ಲಾಧ್ಯಕ್ಷರ ಆದೇಶದಂತೆ ಅಡ್ಡಮತದಾನ ಮಾಡಿ, ಪಕ್ಷ ದ್ರೋಹ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಿ, ಕಾನೂನು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.