ಜಿಲ್ಲೆ

ಬಿಜೆಪಿಯಿಂದ ಜನ ವಿರೋಧಿ ಆಡಳಿತ; ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಆರೋಪ

ಕಾಂಗ್ರೆಸ್ ಕಾರ್ಯಕರ್ತರ ಹೋಬಳಿ ಮಟ್ಟದ ಸಮಾವೇಶ

ಹನುಮಸಾಗರ; ಅಗತ್ಯ ವಸ್ತುಗಳ ಬೆಲೆ ನಿತ್ಯ ಹೆಚ್ಚಳ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಸುಲಿಗೆ ಮಾಡುತ್ತಿವೆ ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಆರೋಪಿಸಿದರು.

ಪಟ್ಟಣದ ಕರಿಸಿದ್ದೇಶ್ವರ ಮಂಗಲ ಭವನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಹೋಬಳಿ ಮಟ್ಟದ ಸಮಾವೇಶ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೈತರ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ರೈತರಿಗೆ ಸಮರ್ಪಕ ಬಿತ್ತನೆ ಬೀಜ ಹಾಗೂ ಗೊಬ್ಬರ ಸರಬರಾಜು ಮಾಡುತ್ತಿಲ್ಲ. ಬಿಜೆಪಿಯಿಂದ ಬೇಸತ್ತಿರುವ ಜನತೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಪಿಎಂಸಿ ಕಾಯ್ದೆ ರದ್ದುಪಡಿಸಲು ಆಗ್ರಹಿಸಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಗ್ಯಾಸ್, ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್ ಸೇರಿದಂತೆ ವಿವಿಧ ವಸ್ತುಗಳ ಬೆಲೆ ನಿತ್ಯ ಹೆಚ್ಚಳ ಮಾಡುತ್ತಿರುವುದರಿಂದ ಮಧ್ಯಮ ಮತ್ತು ಬಡ ಜನರಿಗೆ ಜೀವನ ನಡೆಸುವುದು ಕಷ್ಟವಾಗಿದೆ. ವಿವಿಧ ಜಿಲ್ಲೆಗಳಲ್ಲಿ ನೆರೆಹಾವಳಿಯಿಂದ ಸಾಕಾಷ್ಟು ಹಾನಿಯಾಗಿದೆ. ಆದರೆ, ಕಳೆದ ವರ್ಷದ ಬಿದ್ದಿರುವ ಮನೆಗಳಿಗೆ ಸಂಬಂಧಿಸಿದಂತೆ ಇನ್ನೂ ಹಣ ಬಿಡುಗಡೆಯಾಗಿಲ್ಲ, ವಿವಿಧ ಇಲಾಖೆಗಳನ್ನು ಖಾಸಗೀಕರಣ ಮಾಡಲು ಹೊರಟಿದ್ದಾರೆ ಎಂದು ಶಾಸಕ ಬಯ್ಯಪುರ ದೂರಿದರು.