ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಉತ್ಸವ, ಭಜನೆ ವಿಶೇಷ ಪೂಜಾ ಕಾರ್ಯಕ್ರಮಗಳೊಂದಿಗೆ ಹನುಮ ಜಯಂತಿಯನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಜಿಲ್ಲಾ ಕೇಂದ್ರದಲ್ಲಿನ ಶ್ರೀ ಅಭಯ ಆಂಜನೇಯ, ವೀರಾಂಜನೇಯ, ಪಂಚಮುಖಿ ಆಂಜನೇಯ ಸೇರಿದಂತೆ ವಿವಿಧ ದೇಗುಲಗಳು ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿದ್ಯುದೀಪಾಲಂಕಾರಗಳಿಂದ ಝಗಮಗಿಸುತ್ತಿದ್ದವು. ವಿಶೇಷ ಹೂವಿನ ಸ್ವಾಗತ ಕಮಾನು, ಅಲಂಕಾರಿಕ ವಸ್ತುಗಳು, ಬಗೆಯ ಬಗೆಯ ಹೂವುಗಳ ಪ್ರದರ್ಶನವು ಆಕರ್ಷಕವಾಗಿತ್ತು. ಬೆಳಿಗ್ಗೆ ಅಭಿಷೇಕದ ಬಳಿಕ ಆಭರಣ, ಹೂವುಗಳೊಂದಿಗೆ ಅಲಂಕಾರವನ್ನು ಕೈಗೊಳ್ಳಲಾಗಿತ್ತು. ವಿವಿಧ ಬಗೆಯ ದಾರ್ಶನಿಕ ದೇವರ ಮೂರ್ತಿಗಳ ರೂಪವು ಗಮನ ಸೆಳೆದವು. ಭಕ್ತ ಸಮೂಹ ಬೆಳಿಗ್ಗೆಯಿಂದಲೇ ಆಲಯಕ್ಕೆ ಬಂದು ಸರದಿ ಸಾಲಿನಲ್ಲಿ ದೇವರ ದರ್ಶನ ಪಡೆದಿದ್ದಲ್ಲಿ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ಭಾಗವಹಿಸಿತ್ತು.
ವಿವಿಧ ಕಲಾ ತಂಡಗಳ ಭಜನೆ, ಪ್ರಮುಖ ರಸ್ತೆಗಳಲ್ಲಿ ದೇವರ ಉತ್ಸವದ ಮೆರವಣಿಗೆ, ಅನ್ನಸಂತರ್ಪಣೆ, ದೇಗುಲಗಳಲ್ಲಿ ತುಂಬಿ ತುಳುಕಾಡುತ್ತಿದ್ದ ಜನ ಸಮೂಹದಿಂದ ದೊಡ್ಡ ಹಬ್ಬದ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.
*ಆದಿಚುಂಚನ ಶ್ರೀಗಳಿಂದ ಪೂಜೆ*
ಪ್ರತಿ ವರ್ಷದಂತೆ ಹನುಮ ಜಯಂತಿ ಅಂಗವಾಗಿ ಸೂಲಾಲಪ್ಪದಿನ್ನೆಯ ಶ್ರೀ ವೀರಾಂಜನೇಯಸ್ವಾಮಿ ದೇಗುಲದಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ಸ್ವತಃ ಶ್ರೀಗಳು ದೇವರಿಗೆ ಅಭಿಷೇಕ ನೆರವೇರಿಸಿದರು. ಮಠದಿಂದ ಕಡಲೆ ಕಾಯಿ ಪರಿಷೆ ಯಶಸ್ವಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು ಮೊದಲ ದಿನ ಕಾರ್ಯಕ್ರಮವು ಹನುಮ ಜಯಂತ್ಯುತ್ಸವದೊಂದಿಗೆ ಚಾಲನೆ ಪಡೆಯಿತು.