ಜಿಲ್ಲೆ

ಹನುಮ ಧ್ವಜ ಹಾರಿಸುವ ಸಂಕಲ್ಪ ಇಂದಿನಿಂದ

ರಾಜಣ್ಣ

ಪಾಂಡವಪುರ: ಕಾಂಗ್ರೆಸ್ ಸರ್ಕಾರದ ಮುಖಂಡರ ಅಣತಿಯಂತೆ ಜಿಲ್ಲಾಡಳಿತ ನಡೆದುಕೊಂಡು ರಾಷ್ಟ್ರಧ್ವಜ ಮತ್ತು ಹನುಮ ಧ್ವಜಕ್ಕೆ ಅಪಮಾನ ಎಸಗಿದೆ. ಜಿಲ್ಲಾಡಳಿತದ ಕ್ರಮ ಖಂಡಿಸಿ ಫೆ.3 ರಿಂದ ಪ್ರತಿ ಮನೆ ಮೇಲೂ ಹನುಮ ಧ್ವಜ ಹಾರಿಸುವ ಸಂಕಲ್ಪದೊಂದಿಗೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಮಾರ್ಕಂಡಯ್ಯ ತಿಳಿಸಿದರು.


ಪಟ್ಟಣದ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಹಿಂದು ಪರ ಸಂಘಟನೆಯ ಕಾರ್ಯಕರ್ತರೊಂದಿಗೆ ಗುರುವಾರ ಜಮಾವಣೆಗೊಂಡ ಮುಖಂಡರು, ಮನೆ ಮನೆ ಮೇಲೂ ಹನುಮ ಧ್ವಜ ಹಾರಿಸುವ ಸಂಕಲ್ಪ ಮಾಡಿ ಮಾತನಾಡಿದರು.


ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಇಳಿಸಿದ್ದು ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆ ತಂದಿದೆ. ಹೀಗಾಗಿ ಪ್ರತಿ ಜಿಲ್ಲೆಯ ಸುಮಾರು 5 ಲಕ್ಷ ಮನೆಗಳ ಮೇಲೆ ಹನುಮ ಧ್ವಜ ಹಾರಿಸುವ ಸಂಕಲ್ಪ ಮಾಡಲಾಗಿದೆ. ಜತೆಗೆ ಕೆರಗೋಡಿನಲ್ಲೂ ಮತ್ತೆ ಹನುಮ ಧ್ವಜ ಹಾರಿಸಲಾಗುವುದು. 40 ವರ್ಷಗಳ ಹಿಂದೆಯೇ ಹನುಮ ಧ್ವಜಸ್ತಂಭ ಸ್ಥಾಪನೆಗೆ ಭೂಮಿಪೂಜೆ ಕೂಡ ನೆರವೇರಿಸಲಾಗಿದೆ. ಅದೇ ಸ್ಥಳದಲ್ಲಿ ಹನುಮ ಧ್ವಜ ಹಾರಿಸುವುದಾಗಿ ಹನುಮ ಭಕ್ತರು, ರಾಮ ಭಕ್ತರು ಸಂಕಲ್ಪ ಕೈಗೊಂಡಿದ್ದಾರೆ ಎಂದರು.


ವಿಶ್ವ ಹಿಂದು ಪರಿಷತ್ ತಾಲೂಕು ಸಂಚಾಲಕ ಹಾಗೂ ನಿವೃತ್ತ ಯೋಧ ಕಮಲೇಶ್ ಮಾತನಾಡಿ, ಹನುಮ ಸಮಿತಿ ಮೂಲಕ ಸರ್ಕಾರದ ನಡವಳಿಕೆ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗಿದೆ. ಜತೆಗೆ ಜಿಲ್ಲಾಡಳಿತ ರಾಷ್ಟ್ರಧ್ವಜ ಮತ್ತು ಹನುಮ ಧ್ವಜಕ್ಕೆ ಮಾಡಿರುವ ಅಪಮಾನವನ್ನು ಖಂಡಿಸಿ ಫೆ.3 ರಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರು ಜಾತಿ, ಮತವಿಲ್ಲದೆ ಸಹಕಾರ ನೀಡಿ ಹನುಮ ಸಮಿತಿ ವತಿಯಿಂದ ಪ್ರತಿ ಮನೆ ಮೇಲೂ ಹನುಮ ಧ್ವಜ ಹಾರಾಟದ ಸಂಕಲ್ಪಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.


ಹಿಂದು ಸಂಘಟನೆಯ ಮುಖಂಡರಾದ ಎಚ್.ಎನ್.ಮಂಜುನಾಥ್, ವಿಎಚ್‌ಪಿ ಜಿಲ್ಲಾ ಸಂಚಾಲಕ ಡಾಮಡಹಳ್ಳಿ ಕೇಶವ, ಹಿಂದು ಜಾಗರಣಾ ವೇದಿಕೆಯ ಅರಳಕುಪ್ಪೆ ಯೋಗೇಶ್, ಚೇತನ್ ಬಜರಂಗದಳದ ಶಂಕರ್, ಅಂಬರೀಷ್ ಇತರರು ಇದ್ದರು.