ಜಿಲ್ಲೆ

ಹಸು ಕೆಚ್ಚಲು ಕೂಯ್ದವರ ಬಂಧಿಸಲು ಆಗ್ರಹ: ಕೆರಗೋಡಲ್ಲಿ ಹನುಮಧ್ವಜ ಸಮಿತಿ ಪ್ರತಿಭಟನೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಮೂರು ಹಸುಗಳ ಕೆಚ್ಚಲ ಕತ್ತರಿಸಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಹನುಮಧ್ವಜ ಸಮಿತಿ ಕಾರ್ಯಕರ್ತರು ತಾಲೂಕಿನ ಕೆರಗೋಡು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಹಾಲು ಕೊಡುವ ಹಸುವಿನ ಕೆಚ್ಚಲನ್ನು ದುಷ್ಕರ್ಮಿಗಳು ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ಇದನ್ನು ಸ್ಥಳೀಯರು ಕೂಡ ಪ್ರಶ್ನಿಸಿದ್ದಾರೆ. ಅವರ ಜತೆಯು ಸಹ ಕೆಲ ಮತಾಂಧ ಕಿಡಿಗೇಡಿಗಳು ಜಗಳ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದಾಗಿನಿಂದ ಇಂತಹ ಘಟನೆಗಳು ಹೆಚ್ಚಾಗಿದ್ದು, ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಹನುಮಧ್ವಜ ಸಮಿತಿಯ ಮುಖಂಡ ಬಸಂತ್ ಕೆರಗೋಡು ಮಾತನಾಡಿ, ಕಿಡಿಗೇಡಿಗಳು ಈ ಕೃತ್ಯವನ್ನು ಎಸಗಿದ್ದು, ಹಸುಗಳ ಮೇಲೆ ಇವರ ದೌರ್ಜನ್ಯ ಖಂಡನೀಯ. ಇದನ್ನು ಪಕ್ಷಾತೀತವಾಗಿ ಎಲ್ಲರೂ ಖಂಡಿಸಬೇಕು. ಮೂರು ಹಸುಗಳ ಕೆಚ್ಚಲನ್ನು ಕತ್ತರಿಸಿ ಹಾಕಿರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲ ಯಶವಂತ್ ಮಾತನಾಡಿ, ವಿಶೇಷವಾಗಿ ಸಂಕ್ರಾಂತಿ ಹಬ್ಬವನ್ನು ಮುಂದಿಟ್ಟುಕೊಂಡು ಹಿಂದುಗಳ ಮನಸ್ಸಿಗೆ ಗಾಯ ಮಾಡುವ ಉದ್ದೇಶದಿಂದಲೇ ಇವರು ಪೂಜಿಸುವ ಆರಾಧ್ಯ ದೈವ ಗೋವುಗಳ ಕೆಚ್ಚಲನ್ನು ಕತ್ತರಿಸಿ ಹಾಕಿರುವುದು ನಾಚಿಕೆಗೇಡಿನ ಸಂಗತಿ, ಇವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಕಾರ್ತಿಕ್, ರಮೇಶ್, ಹರೀಶ್, ಅಪ್ಪಾಜಿ, ಸಾಗರ್, ಪ್ರಸನ್ನ, ರಂಗಣ್ಣ, ಕೆಂಪಮ್ಮ, ಚಿಕ್ಕೋಳಮ್ಮ, ಎಲ್.ಆರ್.ನಾಗೇಶ್, ರವಿ ಇತರರಿದ್ದರು.