ಹನುಮಸಾಗರ: ರಾಜ್ಯ ಸರ್ಕಾರ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುತ್ತಿಲ್ಲವೆಂದು ಆರೋಪಿಸಿ ಸೇಬಿನಕಟ್ಟಿ ಗ್ರಾಮದ ಮಹಿಳೆಯರು ಕಬ್ಬರಗಿ ಗ್ರಾಪಂ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ನರೇಗಾ ಕಾಮಗಾರಿ ಆರಂಭಿಸುತ್ತಿಲ್ಲ. ಕಳೆದ ನಾಲ್ಕೈದು ದಿನಗಳಿಂದ ಕುಡಿವ ನೀರಿಲ್ಲದೆ ಸಮಸ್ಯೆ ಅನುಭವಿಸುವಂತಾಗಿದೆ. ಗ್ರಾಮಾಡಳಿತ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ. ನಮ್ಮ ಸಮಸ್ಯೆಗಳನ್ನು ಗ್ರಾಪಂ ಸರಿಯಾಗಿ ಆಲಿಸುತ್ತಿಲ್ಲ. ನರೇಗಾ ಕಾಮಗಾರಿಗಳನ್ನು ಗ್ರಾಮದಲ್ಲಿ ಕೈಗೊಳ್ಳದೆ ತಾರತಮ್ಯ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ಸ್ಥಳಕ್ಕೆ ತಾಪಂ ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ ಭೇಟಿ ನೀಡಿ, ಮನರೇಗಾ ಕೆಲಸವನ್ನು ಎರಡ್ಮೂರು ದಿನಗಳಲ್ಲಿ ಆರಂಭಿಸಲಾಗುತ್ತದೆ. ನೀರಿನ ಸಮಸ್ಯೆ ಶೀಘ್ರವೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಪಿಡಿಒ ಶರಣಮ್ಮ ಕೂರನಾಳ, ಪಿಎಸ್‌ಐ ಧನುಂಜಯ ಹಿರೇಮಠ, ಪ್ರಮುಖರಾದ ಮಲ್ಲಮ್ಮ, ಹನುಮಮ್ಮ, ಗಂಗಮ್ಮ ಇತರರಿದ್ದರು.