ಜಿಲ್ಲೆ

ಹನುಮ ಜಯಂತಿ ಸಂಭ್ರಮ ; ಕರೊನಾತಂಕವಿಲ್ಲದೆ ರಾಮನ ಭಂಟನ ಸ್ಮರಣೆ

Tumakuru

ತುಮಕೂರು: ಜಿಲ್ಲೆಯೆಲ್ಲೆಡೆ ಹನುಮ ಜಯಂತಿಯನ್ನು ಸಡಗರ, ಸಂಭ್ರಮದ ಜತೆ ಶ್ರದ್ಧಾಭಕ್ತಿಯಿಂದ ಭಾನುವಾರ ಆಚರಿಸಲಾಯಿತು. ಕರೊನಾತಂಕವಿಲ್ಲದೆ ರಾಮನ ಭಂಟನ ಸ್ಮರಣೆಯಲ್ಲಿ ಜನ ಮಿಂದೆದ್ದರು.

ನಗರದ ಪ್ರಸಿದ್ಧ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ಬೆಳಗ್ಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಕೋವಿಡ್ ಮಾರ್ಗಸೂಚಿಯಂತೆ ಭಕ್ತರು ಸಾಲಿನಲ್ಲಿ ನಿಂತು ಸ್ವಾಮಿ ದರ್ಶನ ಪಡೆದರು. ನಗರದ ಎಲ್ಲ ಅಂಜನೇಯ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪಂಚಾಮೃತ ಅಭಿಷೇಕ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಭಕ್ತ ಸಾಗರ: ಹನುಮ ಜಯಂತಿ ಹಿನ್ನೆಲೆಯಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬೆಳಗಿನಿಂದಲೇ ಭಕ್ತಗಣ ಆಗಮಿಸಿತ್ತು. ಚಿಕ್ಕಪೇಟೆ ಮಾರುತಿ ಸರ್ಕಲ್‌ನಲ್ಲಿರುವ ಶ್ರೀಆಂಜನೇಯಸ್ವಾಮಿಗೆ ಖರ್ಜೂರದ ಅಲಂಕಾರ, ಹನುಮಂತಪುರದಲ್ಲಿರುವ ಬೈಲಾಂಜನೇಯಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ಅಭಿಷೇಕ, ಹೋಮ, ಯಜ್ಞಾದಿಗಳು ಜರುಗಿದವು. ಸಂಜೆ ಅನ್ನಸಂತರ್ಪಣೆ ನಡೆಯಿತು.

ನಗರದ ಹೊರವಲಯದಲ್ಲಿರುವ ಶೆಟ್ಟಿಹಳ್ಳಿ ಶ್ರೀಆಂಜನೇಯಸ್ವಾಮಿಗೆ ಬೆಳಗ್ಗೆ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಪ್ರಸಾದ ವಿನಿಯೋಗ ನಡೆಯಿತು. ಸ್ವಾಮಿಯ ಉತ್ಸವ ಕೂಡ ನಡೆಯಿತು. ಬಿ.ಎಚ್.ರಸ್ತೆಯ ಆರ್‌ಟಿಒ ಕಚೇರಿ ಆವರಣದಲ್ಲಿನ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ವಿಶೇಷ ಹೂವು ಹಾಗೂ ನಿಂಬೆಹಣ್ಣಿನ ಅಲಂಕಾರ ಮಾಡಲಾಗಿತ್ತು.