ಅರಕಲಗೂಡು: ತಾಲೂಕಿನ ಬಸವಾಪಟ್ಟಣದಲ್ಲಿ ಶನಿವಾರ ಮೂರನೇ ವರ್ಷದ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ಹನುಮ ಜಯಂತಿ ಆಚರಣಾ ಸಮಿತಿ ವತಿಯಿಂದ ನಡೆದ ಕಾರ್ಯಕ್ರಮದ ಅಂಗವಾಗಿ ಗ್ರಾಮವನ್ನು ಕೇಸರಿ ಬಾವುಟಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆ ಹಳೆಯ ಬಸ್ ನಿಲ್ದಾಣ ಬಳಿಯ ಶ್ರೀ ಅಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅಲಂಕೃತ ಬೆಳ್ಳಿ ರಥದಲ್ಲಿ ಹನುಮ ದೇವರ ಮೂರ್ತಿ ಕೂರಿಸಿ ಮೆರವಣಿಗೆಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಅಲಂಕೃತ ವಾಹನದಲ್ಲಿ ಬಿಲ್ಲು ಹಿಡಿದ ಶ್ರೀರಾಮ, ಅಂಜನೇಯಸ್ವಾಮಿ ವೇಷಾಧಾರಿ ಹಾಗೂ ವಿವಿಧ ಕಲಾತಂಡಗಳು ಮೆರವಣಿಗೆಗೆಗೆ ಮೆರುಗು ನೀಡಿದವು. ಯುವಕರು ಪಟಾಕಿ ಸಿಡಿಸಿ ಶ್ರೀರಾಮನ ಜೈಕಾರ ಹಾಕಿ, ಡಿಜೆ ಹಾಡಿಗೆ ಕುಣಿದು ಸಂಭ್ರಮಿಸಿದರು. ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಬಾಲಣ್ಣ, ಬಾಬು, ಬಿ.ಜಿ.ನಾಗರಾಜು, ಹರೀಶ್, ಶಿವಣ್ಣ, ಅಂಬರೀಶ್, ಸುಧಾಕರ್, ರಾಜು, ಪ್ರಸನ್ನ, ಶಿಕ್ಷಕ ಸಮೀರ್, ಗ್ರಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು.