ಜಿಲ್ಲೆ

ದಸರಾ ನೆನಪಿಸಿದ ಶೋಭಾಯಾತ್ರೆ

ಸುನಿಲ್ ಪೊನ್ನೇಟಿ

ಮಡಿಕೇರಿ

ಅಬ್ಬರದ ಡಿಜೆ ಸಂಗೀತ, ಕಣ್ಣು ಕೋರೈಸುವ ಬಣ್ಣ ಬಣ್ಣದ ಬೆಳಕಿನ ರಂಗು, ದೇವ-ದಾನವರು ಮತ್ತೆ ಧರೆಗಿಳಿದು ಬಂದAಥ ಅನುಭವ ನೀಡಿದ ಪ್ರತಿಕೃತಿಗಳ ಚಲನವಲನ, ತುಂತುರು ಮಳೆ, ಹಿತಕರವಾದ ತಣ್ಣನೆ ಚಳಿಯಲ್ಲೂ ಬೆವರಿಳಿಸುತ್ತಿದ್ದ ರಾಕ್ಷಸರ ಅಟ್ಟಹಾಸ.. ಇದು ಹನುಮ ಜಯಂತಿ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಕುಶಾಲನಗರದಲ್ಲಿ ಏರ್ಪಡಿಸಿದ್ದ ಶೋಭಾಯಾತ್ರೆ ವೇಳೆ ಕಂಡು ಬಂದ ದೃಶ್ಯಗಳು.

ಮಡಿಕೇರಿಯ ಅದ್ಧೂರಿ ದಸರಾವನ್ನು ನೆನಪಿಸುವಂತೆ ಕುಶಾಲನಗರದಲ್ಲಿ ಕುಶಾಲನಗರ ಮತ್ತು ಸುತ್ತಮುತ್ತಲಿನ ಊರುಗಳಿಂದ ಆಗಮಿಸಿದ್ದ ಝಗಮಗಿಸುವ ಮಂಟಪಗಳು ದೇವಲೋಕವನ್ನೇ ಭೂಮಿಗೆ ಇಳಿಸಿದ್ದವು. ಜಿಲ್ಲೆ ಮಾತ್ರವಲ್ಲದೆ ಪಕ್ಕದ ಮೈಸೂರು ಮತ್ತು ಹಾಸನ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಹನುಮ ಭಕ್ತರು ಅದರಲ್ಲೂ ಯುವ ಸಮೂಹ ಈ ಸಂದರ್ಭದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಸುಸ್ತೇ ಆಗುವುದಿಲ್ಲ ಎನ್ನುವಂತೆ ಡಿಜೆ ಸಂಗೀತಕ್ಕೆ ರಾತ್ರಿ ಪೂರ್ತಿ ಕುಣಿದು, ಕುಪ್ಪಳಿಸಿ ಸಂಭ್ರಮಿಸಿದರು.

ಕುಶಾಲನಗರದಲ್ಲಿ ಹನುಮ ಜಯಂತಿ ವರ್ಷದಿಂದ ವರ್ಷಕ್ಕೆ ಜನಪ್ರಿಯ ಆಗುತ್ತಿದೆ. ಆರಂಭದಲ್ಲಿ ರಥಬೀದಿಯಲ್ಲಿರುವ ಆಂಜನೇಯ ದೇವಾಲಯದ ಉತ್ಸವ ಮೂರ್ತಿ ಹೊತ್ತ ಮಂಟಪದ ಮೆರವಣಿಗೆ ಮಾತ್ರ ನಡೆಯುತ್ತಿತ್ತು. ನಂತರದ ವರ್ಷಗಳಲ್ಲಿ ಇದಕ್ಕೊಂದು ಉತ್ಸವದ ರೂಪ ಕೊಡಲು ಚಿಂತನೆ ನಡೆಸಿದ ಸ್ಥಳೀಯ ಉತ್ಸಾಹಿ ಯುವಕರ ಪ್ರಯತ್ನಕ್ಕೆ ಕಳೆದ ಮೂರು ವರ್ಷಗಳಿಂದ ಉತ್ತಮ ಫಲ ಸಿಗುತ್ತಿದೆ. ವರ್ಷ ಕಳೆದಂತೆ ಇಲ್ಲಿ ಪಾಲ್ಗೊಳ್ಳುವ ಮಂಟಪಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಈ ವರ್ಷ ರಥಬೀದಿಯ ಆಂಜನೇಯ ದೇವಾಲಯದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ ಮಂಟಪದ ಜತೆಗೆ ಗೋಪಾಲ್ ಸರ್ಕಲ್‌ನ ಗಜಾನನ ಗೆಳೆಯರ ಬಳಗ, ಮಾದಾಪಟ್ಟಣದ ರಾಮಧೂತ ಜಯಂತಿ ಆಚರಣಾ ಸಮಿತಿ, ಕುಶಾಲನಗರ ಹೆಚ್‌ಆರ್‌ಪಿ ಕಾಲೋನಿ ರಾಮಮಂದಿರದ ಅಂಜನಿ ಪುತ್ರ ಜಯಂತ್ಯುತ್ಸವ ಆಚರಣಾ ಸಮಿತಿ, ಹಾರಂಗಿ-ಚಿಕ್ಕತೂರು ವೀರ ಹನುಮ ಸೇವಾ ಸಮಿತಿ, ಮುಳ್ಳುಸೋಗೆಯ ಚಾಮುಂಡೇಶ್ವರಿ ಉತ್ಸವ ಸಮಿತಿ ಮಂಟಪ, ಕೂಡಿಗೆ ಹನುಮ ಸೇವ ಸಮಿತಿ, ಬೈಚನಹಳ್ಳಿ ಗೆಳೆಯರ ಬಳಗದ ಮಂಟಪ, ಗುಡ್ಡೆಹೊಸೂರು-ಬಸವನÀಹಳ್ಳಿಯ ವೀರಾಂಜನೇಯ ಸೇವಾ ಸಮಿತಿಯ ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಉತ್ಸವದ ಕಳೆ ಹೆಚ್ಚಿಸಿದವು.

ದಶಮಂಟಪ ಸಮಿತಿ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ಅವರೇ ಹೇಳಿಕೊಳ್ಳುವಂತೆ ಈ ಬಾರಿಯ ಹನುಮ ಜಯಂತಿ ಉತ್ಸವದ ಒಟ್ಟು ಅಂದಾಜು ಬಜೆಟ್ 1.5 ಕೋಟಿ ರೂ. ಆದರೆ ಶೋಭಾಯಾತ್ರೆಯಲ್ಲಿನ ಅದ್ಧೂರಿತನ, ಮಂಟಪಗಳಲ್ಲಿ ಅಳವಡಿಸಿದ ವೈಭವ, ಉಪಯೋಗಿಸಿದ ತಾಂತ್ರಿಕತೆ ಮತ್ತಿತರ ಅಂಶಗ¼ ಆಧಾರದಲ್ಲಿ ಹೇಳುವುದಾದರೆ ಬಜೆಟ್ ಮೊತ್ತ ಇದಕ್ಕಿಂತಲೂ ಹೆಚ್ಚಾಗಿರುವ ಸಾಧ್ಯತೆ ಇದೆ. ಸರ್ಕಾರದ ಯಾವುದೇ ಆರ್ಥಿಕ ನೆರವು ಇಲ್ಲದೆ ಜನ ಸಾಮಾನ್ಯರ ಸಹಕಾರದಿಂದ ನಿಜಾರ್ಥದಲ್ಲಿ ‘ಜನೋತ್ಸವ’ ಆಗಿ ಕುಶಾಲನಗರ ಹನುಮ ಜಯಂತಿ ಆಚರಣೆ ಆಗಿದೆ ಎನ್ನುವುದು ಸಮಿತಿ ಪದಾಧಿಕಾರಿಗಳ ಮಾತು.

ಕುಶಾಲನಗರದ ಹನುಮ ಜಯಂತಿಯ ಈ ವರ್ಷದ ಅದ್ಧೂರಿತನ ಗಮನಿಸಿದರೆ, ಮುಂದೊAದು ದಿನ ಕೊಡಗಿನ ಪಾಲಿಗೆ ಮತ್ತೊಂದು ದಸರಾ ಆಗುವ ಎಲ್ಲಾ ಸಾಧ್ಯತೆಗಳು ಇವೆ ಎನ್ನುತ್ತಾರೆ ಸ್ಥಳೀಯರು. ‘ಜನೋತ್ಸವ’ ಆಗಿರುವ ಹನುಮ ಜಯಂತಿ ಜನರಿಗೆ ಇನ್ನಷ್ಟು ಅಪ್ಯಾಯಮಾನ ಅಗಬೇಕಾದರೆ ಮುಂದಿನ ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ. ಪ್ರಮುಖವಾಗಿ ಎಲ್ಲಾ ಮಂಟಪಗಳ ಪ್ರಮುಖ ಆಕರ್ಷಣೆ ಆಗಿರುವ ಕಥಾ ಸಾರಾಂಶ ಭಾಗವಹಿಸಿದ ಎಲ್ಲರಿಗೂ ನೋಡುವ ಅವಕಾಶ ಸಿಗುವಂತಾಗಬೇಕು. ಆದರೆ ಈ ವರ್ಷ ಇಂಥ ವಾತಾವರಣ ಇರಲಿಲ್ಲ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರದರ್ಶನದ ವ್ಯವಸ್ಥೆ ಇತ್ತಾದರೂ ಶೇ. 20ರಷ್ಟು ಜನರಿಗೂ ಈ ಪ್ರದರ್ಶನಗಳನ್ನು ಸಂಪೂರ್ಣವಾಗಿ ಸವಿಯಲು ಸಾಧ್ಯವಾಗಿಲ್ಲ. ಬಹುತೇಕರು ಕುಶಾಲನಗರ ಹೆಚ್‌ಆರ್‌ಪಿ ಕಾಲೋನಿ ರಾಮಮಂದಿರದ ಅಂಜನಿ ಪುತ್ರ ಜಯಂತ್ಯುತ್ಸವ ಆಚರಣಾ ಸಮಿತಿ ಮಂಟಪದ ಪ್ರದರ್ಶನ ಮುಗಿದ ಕೂಡಲೇ ಮರಳುತ್ತಿದ್ದ ದೃಶ್ಯ ಕಂಡು ಬಂತು. ಒಂದೊAದು ಮಂಟಪಕ್ಕೂ ಲಕ್ಷಾಂತರ ರೂ. ವೆಚ್ಚ ಮಾಡಲಾಗುತ್ತಿದ್ದು, ಇದು ಸಾರ್ಥಕವಾಗಬೇಕಾದರೆ ಪ್ರದರ್ಶನ ವೀಕ್ಷಣೆ ಎಲ್ಲರಿಗೂ ಲಭ್ಯವಾಗುವಂತೆ ಆಗಬೇಕು. ಶೋಭಾಯಾತ್ರೆ ರಾಷ್ಟಿçÃಯ ಹೆದ್ದಾರಿ 275ರಲ್ಲಿ ಸಂಚರಿಸುವುದರಿAದ ಸಂಚಾರ ವ್ಯವಸ್ಥೆಯಲ್ಲೂ ಸಮಸ್ಯೆ ಆಗುತ್ತದೆ. ಈ ನಿಟ್ಟಿನಲ್ಲೂ ಉತ್ಸವ ಸಮಿತಿ ಯೋಚಿಸಬೇಕಾಗಿದೆ ಎನ್ನುವ ಸಲಹೆಗಳು ಕೇಳಿಬರುತ್ತಿದೆ.

ಹನುಮ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಮಂಟಪಗಳ ಸ್ಪರ್ಧೆಯಲ್ಲಿ ತೀರ್ವ ಪೈಪೋಟಿ ಕಂಡು ಬಂತು. ಹಾಗಾಗಿ ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಗುಡ್ಡೆಹೊಸೂರು-ಬಸವನಹಳ್ಳಿ ವೀರಾಂಜನೇಯ ಸೇವಾ ಸಮಿತಿ ಮತ್ತು ಕೂಡಿಗೆಯ ಹನುಮ ಸೇವಾ ಸಮಿತಿ ಮಂಟಪಗಳು ಪ್ರಥಮ ಸ್ಥಾನವನ್ನು ಹಂಚಿಕೊAಡವು. ಮುಳ್ಳುಸೋಗೆಯ ಶ್ರೀ ಚಾಮುಂಡೇಶ್ವರಿ ಉತ್ಸವ ಸಮಿತಿಯ ಮಂಟಪ ದ್ವಿತೀಯ ಸ್ಥಾನ ಪಡೆದುಕೊಂಡಿತು. ಕಳೆದ ವರ್ಷ ಪ್ರಥಮ ಸ್ಥಾನ ಪಡೆಯುವ ಮೂಲಕ ಈ ಬಾರಿ ಭಾರಿ ನಿರೀಕ್ಷೆ ಮೂಡಿಸಿದ್ದ ಕುಶಾಲನಗರ ಹೆಚ್‌ಆರ್‌ಪಿ ಕಾಲೋನಿ ರಾಮ ಮಂದಿರದ ಅಂಜನಿ ಪುತ್ರ ಜಯಂತ್ಯುತ್ಸವ ಆಚರಣಾ ಸಮಿತಿಯ ಮಂಟಪ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಚಿಕ್ಕತ್ತೂರು-ಹಾರಂಗಿ ವೀರ ಹನುಮ ಸೇವಾ ಸಮಿತಿ ಹಾಗೂ ಬೈಚನಹಳ್ಳಿ ಗೆಳೆಯರ ಬಳಗ ಮಂಟಪಗಳು ನಂತರದÀ ಸ್ಥಾನ ಪಡೆದುಕೊಂಡವು.

ಕಥಾ ಸಾರಾಂಶ ಪ್ರಸ್ತುತಪಡಿಸಿದ ರೀತಿ, ಮಂಟಪದ ಪ್ರಭಾವಳಿ, ಸ್ಟುಡಿಯೋ ವ್ಯವಸ್ಥೆಗಳ ಬಳಕೆ, ಕಥಾ ಸಾರಾಂಶಕ್ಕೆ ಬಳಕೆಯಾದ ಧ್ವನಿ ಮುದ್ರಣ, ಮತ್ತು ಅವುಗಳ ಪ್ರಸ್ತುತಿ, ಮಂಟಪಗಳಲ್ಲಿ ಅಳವಡಿಸಿರುವ ಪ್ರತಿಕೃತಿಗಳ ಚಲನೆ, ಬಳಕೆಯಾಗಿರುವ ವಾಹನಗಳು ಮತ್ತಿತರ ಅಂಶಗಳನ್ನು ಗಮನಿಸಿ ತೀರ್ಪುಗಾರರು ತಮ್ಮ ತೀರ್ಪು ನೀಡಿದರು

ಶೋಭಾಯಾತ್ರೆ ವೇಳೆ ಕೆಲಸ ಸಮಯ ತುಂತುರು ಮಳೆ ಸುರಿದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆಗಾಗ್ಗೆ ವಿದ್ಯುತ್ ಕೂಡ ಕೈ ಕೊಡುತ್ತಿತ್ತು. ಎಸ್‌ಪಿ ಕೆ. ರಾಮರಾಜನ್ ಮತ್ತು ಹೆಚ್ಚುವರಿ ಎಸ್.ಪಿ. ಸುಂದರ್ ರಾಜ್, ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ಥ್ ಕಲ್ಪಿಸಲಾಗಿತ್ತು.

ದಶಮಂಟಪ ಸಮಿತಿ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಉಪಾಧ್ಯಕ್ಷ ಕಿಶೋರ್ ಕುಮಾರ್, ಬಾಲಕೃಷ್ಣ, ಹೆಚ್.ಟಿ. ವಸಂತ, ಪ್ರಧಾನ ಕಾರ್ಯದರ್ಶಿ ರಾಮನಾಥನ್, ಖಜಾಂಚಿ ಗಿರೀಶ್, ಸಹ ಕಾರ್ಯದರ್ಶಿ ಸುನಿಲ್, ನಿರ್ದೇಶಕ ಕೆ.ಎಸ್. ನಾಗೇಶ್, ಅಮೃತ್‌ರಾಜ್ ಹಾಗೂ ವಿವಿಧ ಮಂಟಪಗಳ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದು ಮೇಲ್ವಿಚಾರಣೆ ನಡೆಸಿದರು.

ಕುಶಾಲನಗರದಲ್ಲಿ ಹನುಮ ಜಯಂತಿ ಆಚರಣೆ ಈ ಬಾರಿ ಅಂದುಕೊAಡAತೆ ಯಶಸ್ವಿಯಾಗಿ ನಡೆದಿದೆ. ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಹೆಚ್ಚಾಗುತ್ತಿರುವುದು ಈ ವರ್ಷ ಸಾಬೀತಾಗಿದೆ. ಆಗಮಿಸುವ ಜನರ ನಿರೀಕ್ಷೆಗೆ ತಕ್ಕಂತೆ ಹನುಮ ಜಯಂತಿ ಆಚರಣೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು ಮುಂದಡಿ ಇಡಲಾಗಿದೆ. ಎಲ್ಲಾ ಉತ್ಸವ ಸಮಿತಿಗಳ ಸಹಕಾರ ಉತ್ತಮವಾಗಿತ್ತು. ಮುಂದಿನ ವರ್ಷದಿಂದ ಈ ಉತ್ಸವ ಇನ್ನೂ ವಿಜೃಂಭಣೆಯಿAದ ನಡೆಯಲಿದೆ.

ಎಂ.ಡಿ. ಕೃಷ್ಣಪ್ಪ, ಅಧ್ಯಕ್ಷ, ಹನುಮ ಜಯಂತಿ ದಶಮಂಟಪ ಸಮಿತಿ

ಹನುಮ ಜಯಂತಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಮಂಟಪಗಳು ಒಂದಕ್ಕಿAತ ಒಂದು ಚೆನ್ನಾಗಿತ್ತು. ಹನುಮ ಜಯಂತಿಗೆ ಆಗಮಿಸಿದ ಎಲ್ಲರಿಗೂ ಆ ಮಂಟಪಗಳ ಪ್ರದರ್ಶನ ನೋಡುವ ಅವಕಾಶ ಸಿಗುವಂತಾಗಬೇಕು. ಆಗ ಮಾತ್ರ ಖರ್ಚು ಮಾಡಿದ ಹಣ ಹಾಗೂ ಆ ಮಂಟಪಗಳನ್ನು ರೂಪಿಸಿರುವವರ ಶ್ರಮಕ್ಕೆ ಸಾರ್ಥಕತೆ ಸಿಗಲು ಸಾಧ್ಯ. ದಶಮಂಟಪ ಸಮಿತಿ ಜತೆಯಲ್ಲಿ ನಾವೆಲ್ಲರೂ ಈ ನಿಟ್ಟಿನಲ್ಲಿ ಏನು ಮಾಡಬಹುದು ಎನ್ನುವುದರ ಬಗ್ಗೆ ಚಿಂತನೆ ನಡೆಸಬೇಕಿದೆ.

ವಿ.ಪಿ. ಶಶಿಧರ್, ಅಧ್ಯಕ್ಷ, ಸಾಂಸ್ಕೃತಿಕ ಸಮಿತಿ, ಶ್ರೀ ಗಣಪತಿ ಜಾತ್ರೋತ್ಸವ ಸಮಿತಿ, ಕುಶಾಲನಗರ