ತುಮಕೂರು : ನಗರದೆಲ್ಲೆಡೆ ಹನುಮ ಜಯಂತಿಯನ್ನು ಸಡಗರ, ಸಂಭ್ರಮದ ಜತೆ ಭಕ್ತಿಯಿಂದ ಗುರುವಾರ ಆಚರಿಸಲಾಯಿತು.
ಐತಿಹಾಸಿಕ ಪ್ರಸಿದ್ಧ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯ ಭಕ್ತರು ಸರತಿಯಲ್ಲಿ ನಿಂತು ದೇವರಿಗೆ ಪೂಜೆ ಸಲ್ಲಿಸಿದರು.
ನಗರದ ಎಲ್ಲ ಅಂಜನೇಯ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪಂಚಾಮೃತ ಅಭಿಷೇಕ ಹಾಗೂ ಪ್ರಸಾದ ವಿನಿಮಯ ನಡೆಸಲಾಯಿತು. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬೆಳಗಿನಿಂದಲೇ ಭಕ್ತ ಸಾಗರ ಹರಿದುಬಂದಿತ್ತು. ಭಕ್ತರ ಪ್ರಿಯ ದೇವರು ಹನುಮನಿಗೆ ಬೆಳಗ್ಗೆ 7 ರಿಂದಲೇ ವಿವಿಧ ಪೂಜಾರಾಧನೆಗಳು ನೆರವೇರಿದವು. ಶ್ರೀಆಂಜನೇಯ ಸ್ವಾಮಿ ವೃತ್ತ ಕೇಸರಿ ಧ್ವಜಗಳಿಂದ ಕಂಗೊಳಿಸುತ್ತಿದ್ದು, ಕೋಟೆ ಶ್ರೀಆಂಜನೇಯಸ್ವಾಮಿ ಯುವಕರ ಬಳಗ ಭಕ್ತರಿಗೆ ಹೆಸರು ಬೇಳೆ, ಪಾನಕ, ಮಜ್ಜಿಗೆ ವಿತರಿಸಿತು.
ಬಿ.ಎಚ್.ರಸ್ತೆಯ ಆರ್‌ಟಿಒ ಕಚೇರಿ ಆವರಣದಲ್ಲಿನ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದಲೇ ಭಕ್ತರ ಮಹಾಪೂರವೇ ರಾಮನ ಭಂಟ ಹನುಮನ ದರ್ಶನ ಮಾಡಿ ಪೂಜೆ ಸಲ್ಲಿಸಿದರು.
ಮೆಳೇಕೋಟೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಹಾಗೂ ಪಂಚಾಮೃತ ಅಭಿಷೇಕ ಮಾಡಿ, ಸ್ವಾಮಿಯನ್ನು ಆರಾಧಿಸಲಾಯಿತು.
ಶೆಟ್ಟಿಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ ನಡೆಯಿತು. ಅಭಿಷೇಕ ಹಾಗೂ ಪ್ರಸಾದವಿನಿಯೋಗ ಏರ್ಪಡಿಸಲಾಗಿತ್ತು. ಸ್ವಾಮಿಯ ಉತ್ಸವ ಕೂಡ ನಡೆಯಿತು.
ಮೆಳೇಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಗಂಧದ ಅಲಂಕಾರ ಹಾಗೂ ಅಕ್ಕಿ ಪೂಜೆ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವ ಏರ್ಪಡಿಸಲಾಗಿತ್ತು. ಜಿಲ್ಲೆಯೆಲ್ಲೆಡೆಯೂ ಅಂಜನೇಯ ಸ್ವಾಮಿ ದೇವಾಲಾಯದಲ್ಲಿ ಫೂಜೆ ನಡೆದವು.