ಜಿಲ್ಲೆ

ಹಾಲು ಉತ್ಪಾದಕರ ಸಹಕಾರ ಸಂಘದ ಮುಂದೆ ಧರಣಿ

ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿ ಹೋಬಳಿ ಸಂತೇಶಿವರ ಗೇಟ್ ಬಳಿಯಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಬಾಗಿಲಿಗೆ ಬೀಗ ಹಾಕಿ ಕಳೆದ ಮೂರು ದಿನಗಳಿಂದ ಹಾಲು ಪಡೆಯದೆ ತಲೆ ಮರೆಸಿಕೊಂಡಿರುವ ಕಾರ್ಯದರ್ಶಿ ಚಕ್ರಪಾಣಿ ವಿರುದ್ಧ ಉತ್ಪಾದಕರು ಹಾಗೂ ತಾಲೂಕು ರೈತ ಸಂಘದ ಸದಸ್ಯರು ಶುಕ್ರವಾರ ಸಂಜೆಯಿಂದಲೇ ಅಹೋರಾತ್ರಿ ಧರಣಿ ಹಮ್ಮಿಕೊಂಡಿದ್ದಾರೆ.


ಸಂಘದಲ್ಲಿ 200ಕ್ಕೂ ಹೆಚ್ಚು ಉತ್ಪಾದಕ ಸದಸ್ಯರಿದ್ದು, ದಿನವೊಂದಕ್ಕೆ ಎರಡೂ ಸಮಯದಿಂದ ಸುಮಾರು 2650ರಿಂದ 2750 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಆದರೆ, ಮೂರು ದಿನಗಳಿಂದ ಸಂಘದ ಬಾಗಿಲಿಗೆ ಬೀಗ ಹಾಕಿರುವ ಪರಿಣಾಮ 8 ಸಾವಿರ ಲೀಟರ್ ಹಾಲು ಹಾಳಾಗಿದ್ದು ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.


ಸಂತೇಶಿವರ, ರಾಂಪುರ, ದೇವಲಾಪುರ, ನರೇನಹಳ್ಳಿ, ಹೊಸಹಳ್ಳಿ, ನವಿಲೇಗೇಟ್, ಹೊಸೂರು ಹಾಗೂ ನಾಗೇನಹಳ್ಳಿ ಸೇರಿದಂತೆ 8 ಗ್ರಾಮಗಳು ಈ ಸಂಘಕ್ಕೆ ಒಳಪಡಲಿವೆ. ರಾಂಪುರ ಗ್ರಾಮದ ಚಕ್ರಪಾಣಿ ಎಂಬಾತ ಕಳೆದ 35 ವರ್ಷಗಳಿಂದ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಹಲವು ವರ್ಷಗಳಿಂದ ಹಾಲು ಅಳೆಸುವ ವಿಚಾರದಲ್ಲಿ ಕಾರ್ಯದರ್ಶಿ ಹಾಗೂ ಉತ್ಪಾದಕರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇದೆ ಎನ್ನಲಾಗಿದೆ.


ಹಾಲು ತೂಕ ಹಾಕುವ ಯಂತ್ರದಲ್ಲಿ ಹಲವು ವ್ಯತ್ಯಯ, ಹಾಲಿನಲ್ಲಿ ಉತ್ತಮ ಫ್ಯಾಟ್ ಇದ್ದರೂ ಗುಣಮಟ್ಟವಿಲ್ಲ ಎಂದು ಸತಾಯಿಸುವುದು, ಗುಣಮಟ್ಟದ ಹಾಲನ್ನು ಎಸ್‌ಎನ್‌ಎಫ್(ನೀರಾಲು) ಎಂದು ಪರಿಗಣಿಸಿ ಹಾಲಿನ ದರ ಲೀಟರಿಗೆ 27 ರೂ.ಇದ್ದರೂ ಕೇವಲ 9 ರೂ. ನಂತೆ ಬೆಲೆ ನಿಗದಿಪಡಿಸಿ ಬಿಲ್ ಪಾವತಿಸುವ ಮೂಲಕ ಉತ್ಪಾದಕರಿಗೆ ಮೋಸ ಮಾಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


15 ವರ್ಷಗಳಿಂದಲೂ ಸಂತೇಶಿವರ ಹಾಗೂ ರಾಂಪುರ ಗ್ರಾಮಗಳಲ್ಲಿಯೇ ಹಾಲನ್ನು ಅಳೆಸಿ ಕ್ಯಾನ್ ಮಾಡಿಕೊಂಡು ಖಾಸಗಿ ವಾಹನದ ಮೂಲಕ ಸಂಘಕ್ಕೆ ತರಲಾಗುತಿತ್ತು. ಆದರೆ ಇತ್ತೀಚಿನ ದಿನಗಳಿಂದ ಸಂತೇಶಿವರ ಗ್ರಾಮದ ಉತ್ಪಾದಕರು ನೇರ ಸಂಘಕ್ಕೆ ತಂದು ಹಾಲನ್ನು ಹಾಕುವಂತೆ ತಾಕೀತು ಮಾಡುವ ಮೂಲಕ ದೌರ್ಜನ್ಯ ಎಸಗಿ ರಾಜಕೀಯ ಮಾಡತ್ತಿರುವ ಕಾರ್ಯದರ್ಶಿ ಚಕ್ರಪಾಣಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.


ಚಕ್ರಪಾಣಿಯ ದೌರ್ಜನ್ಯದಿಂದ ಸಂತೇಶಿವರ ಗ್ರಾಮದ ಉತ್ಪಾದಕರಿಗೆ ತೊಂದರೆಯಾಗಿದ್ದು, ಈ ನೀತಿಯನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಸಂತೇಶಿವರ ಗ್ರಾಮದ ಜನರು ತರುವ ಹಾಲಿನ ಮೇಲೆ ಇಲ್ಲದ ಲೋಪ ದೋಷಗಳನ್ನು ಸೃಷ್ಟಿಸಿ ಇಲ್ಲದ ಅವಾಂತರ ಮಾಡಿರುವುದಾಗಿ ಉತ್ಪಾದಕರು ತಮ್ಮ ಅಳಲನ್ನು ತೋಡಿಕೊಂಡರು.


2020ರ ಜನವರಿ ತಿಂಗಳಿಂದ ಚಕ್ರಪಾಣಿ ಮಾಡುತ್ತಿದ್ದ ಮೋಸ, ಅವ್ಯವಹಾರ ಹಾಗೂ ಅವೈಜ್ಞಾನಿಕ ಕ್ರಮಗಳನ್ನು ವಿರೋಧಿಸುವಲ್ಲಿ ಉತ್ಪಾದಕರು ಮುಂದಾಗಿದ್ದು, ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯದರ್ಶಿ ಚಕ್ರಪಾಣಿ ಅನಾರೋಗ್ಯದ ನೆಪವೊಡ್ಡಿ ಸಂಘದ ಬಾಗಿಲಿನ ಬೀಗದ ಕೈಯನ್ನು ಜೂ.4ರಂದು ಬೆಳಗ್ಗೆ ಸಂಘದ ಅಧ್ಯಕ್ಷರಿಗೆ ನೀಡಿ ಹೋದವನು ತಲೆ ಮರೆಸಿಕೊಂಡಿದ್ದಾನೆ ಎಂದು ದೂರಿದರು.


ಮೂರು ದಿನಗಳಿಂದ ಸಂಘದ ಬಾಗಿಲು ತೆರೆಯದೆ ಹಾಲು ಖರೀದಿಸದ ಕಾರಣ 225 ಉತ್ಪಾದಕರಿಂದ ದಿನವೊಂದಕ್ಕೆ 2,700 ಲೀಟರ್‌ನಂತೆ 3 ದಿನಗಳಿಂದ 8 ಸಾವಿರ ಲೀಟರ್ ಹಾಲು ಹಾಳಾಗಿದ್ದು ಉತ್ಪಾದಕರ ಬದುಕು ಬೀದಿಗೆ ಬಂದಿದೆ. ಇದಕ್ಕೆಲ್ಲ ಕಾರ್ಯದರ್ಶಿಯೇ ನೇರ ಹೊಣೆ ಎಂದು ಆರೋಪಿಸಿದರು.


ಶುಕ್ರವಾರ ಸಂಜೆಯಿಂದ ಅಹೋರಾತ್ರಿ ಧರಣಿ ಪ್ರಾರಂಭಿಸಲಾಗಿದ್ದು, ರಾಜ್ಯ ಹಾಗೂ ಹಾಸನ ಹಾಲು ಒಕ್ಕೂಟದ ಮೇಲಧಿಕಾರಿಗಳು ಆಗಮಿಸಿ ಸಮಸ್ಯೆ ಬಗೆಹರಿಸುವುದರ ಜತೆಗೆ ಮೂರು ದಿನಗಳ ಹಾಲಿನ ನಷ್ಟವನ್ನು ಸ್ಥಳದಲ್ಲಿಯೇ ಬರಿಸುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.


ರೈತ ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ, ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ನಂಜುಂಡಪ್ಪ, ತಾಲೂಕು ರೈತ ಸಂಘದ ಅಧ್ಯಕ್ಷ ಶಿವರಾಂ, ಮಾಜಿ ಅಧ್ಯಕ್ಷ ಅಪ್ಪಾಜಿಗೌಡ, ಕಾರ್ಯಾಧ್ಯಕ್ಷ ಧರಣೀಶ್, ಸಂಚಾಲಕ ನಾರಾಯಣಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಉಪಾಧ್ಯಕ್ಷ ರಂಗಶೆಟ್ಟಿ, ನಿರ್ದೇಶಕರಾದ ಗುರುಮೂರ್ತಿ, ರಾಮೇಗೌಡ, ರಾಮಶೆಟ್ಟಿ, ಮರುಳಪ್ಪಶೆಟ್ಟಿ, ಮಂಜಶೆಟ್ಟಿ, ರೈತ ಸಂಘದ ಸದಸ್ಯರು ಹಾಗೂ ಉತ್ಪಾದಕರು ಇದ್ದರು.