ಕಾರವಾರ:ಹಲವು ವಿಶಿಷ್ಟತೆಗಳನ್ನು ಹೊಂದಿದ ಹಣಕೋಣ ಸಾತೇರಿ ದೇವಸ್ಥಾನದ ಬಾಗಿಲು ತೆರೆದಿದ್ದು, ಭಾನುವಾರದಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೊದಲ ದಿನವೇ ಭಕ್ತರು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು. ಸೆ. 28 ರ ಸಾಯಂಕಾಲ 5 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ದೊರೆಯಲಿದೆ.
ಶುಕ್ರವಾರ ಮಧ್ಯರಾತ್ರಿ ದೇವಸ್ಥಾನದ ಬಾಗಿಲು ತೆರೆದಿದ್ದು, ಶನಿವಾರ ಸ್ಥಳೀಯ ಕುಳಾವಿಗಳು ದೇವಿಗೆ ಪೂಜೆ ಸಲ್ಲಿಸಿದರು. ಸೆ.25 ರಿಂದ ಅನ್ನ ಸಂತರ್ಪಣೆ ಪ್ರಾರಂಭವಾಗಲಿದೆ. ಸೆ. 28 ರವರೆಗೆ ಪ್ರತಿ ದಿನ ಬೆಳಗ್ಗೆ 10 ರಿಂದ ಸಾಯಂಕಾಲ 4 ರವರೆಗೂ ಪ್ರಸಾದ ಭೋಜನ ವ್ಯವಸ್ಥೆ ಇರಲಿದೆ. ಭಾನುವಾರ ಸದಾಶಿವಗಡ ಸರಸ್ವತಿ ಕಲಾ ಕೇಂದ್ರದ ಸದಸ್ಯರಿಂದ ಭಜನಾ ಕಾರ್ಯಕ್ರಮ ಜರುಗಿತು.
ಸೆ.25 ರಂದು ಹಣಕೋಣದ ರಾಮದಾಸ ರಾಯ್ಕರ್, ಸೆ.26 ರಂದು ಸದಾಶಿವಗಡ ಓಂಕಾರ ಸೇವಾ ಮಂಡಳದಿಂದ, ಸೆ. 27 ರಂದು ಗೋವಾ ಕಾಣಕೋಣ ಭಕ್ತ ಮಂಡಳಿಯಿಂದ ಭಜನಾ ಕಾರ್ಯಕ್ರಮ ಸಾಯಂಕಾಲ 7 ಗಂಟೆಯಿಂದ ಜರುಗಲಿದೆ.
ಹಲವು ವಿಶೇಷ:
ವರ್ಷದಲ್ಲಿ ಏಳು ದಿನ ಮಾತ್ರ ದೇವಿಯ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡೆಯುತ್ತಾರೆ. ತುಲಾಭಾರ, ಉಡಿ, ಹಣ್ಣು, ಕಾಯಿ, ಹಾಗೂ ಬಂಗಾರದ ಹರಕೆ ಒಪ್ಪಿಸುತ್ತಾರೆ. ಜಾತ್ರೆಗೆ ಹಣಕೋಣ, ಕಾರವಾರ ಮಾತ್ರವಲ್ಲದೇ ಗೋವಾ, ಮಹಾರಾಷ್ಟç ರಾಜ್ಯಗಳ ಲಕ್ಷಾಂತರ ಜನರು ಆಗಮಿಸುವುದು ವಿಶೇಷ.
ಇದನ್ನೂ ಓದಿ: ರಕ್ಷಣಾ ಇಲಾಖೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಕಾರವಾರಕ್ಕೆ ಭೇಟಿ
ದೇವಸ್ಥಾನದ ಬಾಗಿಲು ಭಾದ್ರಪದ ಶುದ್ಧ ಚೌತಿ ಮುಗಿದ ಮೂರನೇ ದಿನ (ಸಪ್ತಮಿಯ ರಾತ್ರಿ) ತಾನಾಗಿಯೇ ತೆರೆದುಕೊಳ್ಳುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆ. ಹಾಗಾಗಿ ಆ ಸಮಯದಲ್ಲಿ ಯಾರೂ ದೇವಸ್ಥಾನದತ್ತ ಸುಳಿಯುವುದಿಲ್ಲ. ದೇವಿಯ ಫೋಟೋ ತೆಗೆಯುವಂತಿಲ್ಲ. ಹಾಗೇನಾದರೂ ತೆಗೆದಲ್ಲಿ ಅವರಿಗೆ ಕೆಡುಕಾಗಲಿದೆ ಎಂಬುದು ಗ್ರಾಮಸ್ಥರ ನಂಬಿಕೆ.
ಜಾನಪದ ಕತೆ:
ಶತಮಾನಗಳ ಹಿಂದೆ ಊರಿನಲ್ಲಿ ಸಾತೇರಿ ಎಂಬಾಕೆ ಆಕೆಯ ಸಹೋದರಿ ಚಣಕ ಎಂಬುವವಳ ಜತೆ ನೆಲೆಸಿದ್ದಳು. ಸಾತೇರಿ ತುಂಬಾ ಜನಾನುರಾಗಿಯಾಗಿದ್ದಳು. ಜನರಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದಳು. ಜನ ಆಕೆಯನ್ನು ತುಂಬ ಗೌರವದಿಂದ ಕಾಣುತ್ತಿದ್ದರು. ಆದರೆ, ಒಂದು ದಿನ ಆಕೆ ಸ್ನಾನ ಮಾಡುವ ಸಮಯದಲ್ಲಿ ದುರುಳನೊಬ್ಬ ಕೆಟ್ಟ ದೃಷ್ಟಿಯಿಂದ ನೋಡಿದ್ದನ್ನು ಗಮನಿಸಿದ ಸಾತೇರಿ ಸಮೀಪದ ಬಾವಿಗೆ ಜಿಗಿದಳು ಎಂಬುದು ಸ್ಥಳೀಯ ಜಾನಪದ ಕತೆ. ಅದಕ್ಕೆ ಪೂರಕವಾಗುವ ಸಾಕ್ಷ್ಯಗಳು ಹಣಕೋಣದಲ್ಲಿ ದೊರೆಯುತ್ತವೆ. ಸಾತೇರಿ ದೇವಸ್ಥಾನ ಪಕ್ಕದಲ್ಲೇ ಬಾವಿ ಇದೆ.
ಸಾತೇರಿ ಬಾವಿಯಲ್ಲಿ ಅದೃಶ್ಯಳಾದ ನಂತರ ಆಕೆಯ ಪವಾಡಗಳು ಶುರುವಾಗುತ್ತವೆ. ನಂತರ ಊರಿನ ಹಿರಿಯರೊಬ್ಬರ ಕನಸಿನಲ್ಲಿ ಆಕೆ ಕಾಣಿಸಿಕೊಂಡು ತನಗೆ ಗುಡಿ ಕಟ್ಟುವಂತೆ ಹೇಳುತ್ತಾಳೆ. ಆಗ ಸಣ್ಣ ಗುಡಿ ನಿರ್ಮಾಣ ಮಾಡಲಾಗಿತ್ತು. ಈಗ ಬೃಹತ್ ಮಂದಿರ, ಸಭಾ ಭವನ ಬೆಳೆದಿದೆ. ಕೇಳಿದ ಫಲ ನೀಡುವ ದೇವಿ ಎಂದು ಇಲ್ಲಿನ ಸಾತೇರಿಯನ್ನು ನಂಬುತ್ತಾರೆ. ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಕಟ್ಟಿಕೊಳ್ಳುತ್ತಾರೆ.