ಜಿಲ್ಲೆ

ತೂಗುಸೇತುವೆ ಕಾಮಗಾರಿ ನೆನೆಗುದಿಗೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಅನುದಾನ ಬಿಡುಗಡೆ ಆಗಿದ್ದರೂ ಶುರುವಾಗದ ಕಾಮಗಾರಿ. ಇದು ಕುಶಾಲನಗರ ತಾಲೂಕು ದುಬಾರೆ ತೂಗು ಸೇತುವೆ ಕತೆ. ಸಾಕಾನೆ ಶಿಬಿರದಿಂದಾಗಿ ದೇಶ ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ದುಬಾರೆಗೆ ತೂಗು ಸೇತುವೆ ಬೇಕು ಎನ್ನುವುದು ದಶಕಗಳಷ್ಟು ಹಳೆಯ ಬೇಡಿಕೆ. ಇದಕ್ಕೆ ಸ್ಪಂದಿಸಿ ಸರ್ಕಾರ ಹಣ ಮಂಜೂರು ಮಾಡಿದ್ದರೂ ಸಂಬAಧಿಸಿದವರ ನಿರ್ಲಕ್ಷö್ಯದಿಂದಾಗಿ ತೂಗು ಸೇತುವೆ ನಿರ್ಮಾಣ ಕಾರ್ಯ ಇನ್ನೂ ನೆನೆಗುದಿಗೆ ಬಿದ್ದಿದೆ.

ರಾಜ್ಯದಲ್ಲಿ ಇರುವ ಸಾಕಾನೆ ಶಿಬಿರಗಳ ಪಟ್ಟಿಯಲ್ಲಿ ಕೊಡಗಿನ ದುಬಾರೆ ಸಾಕಾನೆ ಶಿಬಿರಕ್ಕೆ ತನ್ನದೇ ಆದ ವಿಶೇಷತೆ ಇದೆ. ಕರ್ನಾಟಕದ ಹಳೆಯ ಆನೆ ಶಿಬಿರಗಳ ಪೈಕಿ ಇದು ಕೂಡ ಒಂದು. ಕಾವೇರಿ ನದಿ ದಂಡೆಯಲ್ಲಿ ಈ ಸ್ಥಳ ಇರುವುದರಿಂದ ಪ್ರಾಕೃತಿಕವಾಗಿಯೂ ಆಕರ್ಷಣೀಯ ತಾಣವಾಗಿದೆ. ಹಾಗಾಗಿ ವರ್ಷದ ಎಲ್ಲಾ ದಿನಗಳಲ್ಲೂ ಇಲ್ಲಿ ಪ್ರವಾಸಿಗರನ್ನು ಕಾಣಬಹುದು. ಅದರಲ್ಲೂ ವಾರಾಂತ್ಯ ಮತ್ತು ಇತರ ರಜಾ ದಿನಗಳಲ್ಲಿ ದುಬಾರೆಯಲ್ಲಿ ಪ್ರವಾಸಿಗರ ದಟ್ಟಣೆ ಅಧಿಕವಾಗಿರುತ್ತದೆ.

ನಂಜರಾಯಪಟ್ಟಣ ಮಾರ್ಗವಾಗಿ ದುಬಾರೆ ಸಾಕಾನೆ ಶಿಬಿರಕ್ಕೆ ತೆರಳುವವರು ಕಾವೇರಿ ನದಿಯನ್ನು ದಾಟಲೇಬೇಕು. ಏಪ್ರಿಲ್, ಮೇ ತಿಂಗಳುಗಳ ಬೇಸಿಗೆ ಅವಧಿಯಲ್ಲಿ ನದಿಯಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ಅಲ್ಲಿರುವ ಒಂದರಿAದ ಒಂದು ಕಲ್ಲುಗಳ ಮೇಲೆ ಕಾಲಿಡುತ್ತಾ ನದಿಯ ಮೂಲಕ ಆನೆ ಕ್ಯಾಂಪ್ ತಲುಪಬಹುದು. ಈ ಸಂದರ್ಭ ಎಚ್ಚರ ತಪ್ಪಿದರೆ ನೀರಿಗೆ ಬೀಳುವ ಅಪಾಯವು ಇದೆ. ಈ ಹಿಂದಿನ ವರ್ಷಗಳಲ್ಲಿ ಈ ರೀತಿ ನದಿ ದಾಟಲು ಹೋಗಿ 12ಕ್ಕೂ ಅಧಿಕ ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಜೂನ್ ನಂತರ ಮಳೆಗಾಲದಲ್ಲಿ ಕಾವೇರಿ ತುಂಬಿ ಹರಿಯುವುದರಿಂದ ನದಿ ದಾಟಲು ಕಷ್ಟಪಡಬೇಕಾಗುತ್ತದೆ. ಈ ಸಂದರ್ಭದಲ್ಲಿ ಯಾಂತ್ರಿಕೃತ ದೋಣಿಗಳನ್ನು ಉಪಯೋಗಿಸಲಾಗುತ್ತದೆ. ದುಬಾರೆ ದ್ವೀಪದಲ್ಲಿರುವ ಗಿರಿಜನರ ಓಡಾಟಕ್ಕೆ, ಪ್ರವಾಸಿಗರನ್ನು ಕರೆದೊಯ್ಯಲು ಈ ದೋಣಿಗಳನ್ನು ಬಳಸಲಾಗುತ್ತದೆ. ಒಂದು ದೋಣಿ ದಿನಕ್ಕೆ ಕನಿಷ್ಠ 10 ಬಾರಿಯಾದರೂ ನದಿಯ ಎರಡೂ ದಂಡೆಗಳÀ ಮಧ್ಯೆ ಓಡಾಡುತ್ತದೆ. ಪ್ರವಾಸಿಗರ ಸಂಖ್ಯೆ ಹೆಚ್ಚಿರುವ ರಜಾ ದಿನಗಳಲ್ಲಂತೂ ದೋಣಿಗಳ ಟ್ರಿಪ್ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ.ಇದರಿಂದಾಗಿ ಇಲ್ಲಿಯ ಸೂಕ್ಷö್ಮ ಪರಿಸರದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಆಗುತ್ತಿದೆ.

ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣ ಆದರೆ ನದಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ಸಂಪರ್ಕ ಸುಲಭ ಆಗಲಿದೆ. ನದಿಯಲ್ಲಿರುವ ದ್ವೀಪಗಳ ರಕ್ಷಣೆ, ದುಬಾರೆ ಹಾಡಿಯಲ್ಲಿರುವ ಗಿರಿಜನರಿಗೆ ಹೊರ ಜಗತ್ತಿನ ಸಂಪರ್ಕಕ್ಕೆ, ದೋಣಿಗಳ ಇಂಧನ ಸೋರಿಕೆಯಿಂದ ಆಗುತ್ತಿರುವ ಕಾವೇರಿ ನದಿ ಮಾಲಿನ್ಯಕ್ಕೆ ಕಡಿವಾಣ ಹಾಕಲು, ದುಬಾರೆ ಸಾಕಾನೆ ಶಿಬಿರವನ್ನು ಪ್ರವಾಸಿಗರ ಪಾಲಿಗೆ ಮತ್ತಷ್ಟು ಆಕರ್ಷಣೀಯಗೊಳಿಸಲು ಕೂಡ ತೂಗು ಸೇತುವೆಯಿಂದ ಸಾಧ್ಯವಾಗುತ್ತದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ದುಬಾರೆಗೆ ತೂಗು ಸೇತುವೆ ಬೇಕು ಎನ್ನುವ ಸ್ಥಳೀಯರ ಬೇಡಿಕೆಯನ್ನು ಸರ್ಕಾರದ ಮುಂದೆ ಪರಿಣಾಮಕಾರಿಯಾಗಿ ಮಂಡಿಸಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಇದೇ ಉದ್ದೇಶಕ್ಕೆ 7.30 ಕೋಟಿ ರೂ. ಬಿಡುಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇನ್ನು ಕೂಡ ಈ ಸಂಬAಧ ಆಡಳಿತಾತ್ಮಕ ಪ್ರಕ್ರಿಯೆಗಳೇ ಶುರುವಾಗಿಲ್ಲ ಎನ್ನಲಾಗುತ್ತಿದೆ. ದುಬಾರೆ ತೂಗು ಸೇತುವೆ ನಿರ್ಮಾಣ ವಿಷಯದಲ್ಲಿ ಆಗಿರುವ ಬೆಳವಣಿಗೆ ಬಗ್ಗೆ ಮಂಗಳವಾರ (ಫೆ.11) ನಡೆದ ಕುಶಾಲನಗರ ತಾಲೂಕು ಕೆಡಿಪಿ ಸಭೆಯಲ್ಲಿ ಶಾಸಕ ಡಾ. ಮಂತರ್ ಗೌಡ ಪ್ರಶ್ನಿಸಿದಾಗ ಅರಣ್ಯ ಇಲಾಖೆ ಮತ್ತು ಪಿಡಬ್ಯೂಡಿ ಅಧಿಕಾರಿಗಳು ಪರಸ್ಪರ ಒಬ್ಬರ ಕಡೆ ಮತ್ತೊಬ್ಬರು ಬೆರಳು ತೋರಿಸಿದಾಗಲೇ ಯೋಜನೆಯನ್ನು ಯಾವ ಹಂತಕ್ಕೆ ತಂದಿಟ್ಟಿದ್ದಾರೆ ಎನ್ನುವುದು ಸ್ಪಷ್ಟವಾಗಿತ್ತು.

ತೂಗು ಸೇತುವೆ ನಿರ್ಮಾಣ ಕಾಮಗಾರಿ ಶುರು ಮಾಡಲು ಮಾರ್ಚ್ ತಿಂಗಳು ಸೂಕ್ತವಾಗಿದೆ. ಒಂದು ವೇಳೆ ಮಾರ್ಚ್ನಲ್ಲಿ ಕಾಮಗಾರಿ ಆರಂಭ ಆಗದಿದ್ದರೆ ನಂತರ ಮಳೆ ಶುರುವಾಗಲಿದ್ದು, ಸರಾಗವಾಗಿ ಕೆಲಸ ನಿರ್ವಹಿಸಲು ಸಮಸ್ಯೆ ಆಗಲಿದೆ. ಕಾಮಗಾರಿ ವಿಳಂಬ ಆದಷ್ಟು ಅನುದಾನ ವಾಪಸ್ ಹೋಗುವ ಆತಂಕವೂ ಇದೆ. ಈ ಹಿಂದೆ 2.23 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷö್ಯದಿಂದ ಈ ಪ್ರಸ್ತಾವನೆಯನ್ನೇ ಸರ್ಕಾರ ಹಿಂತೆಗೆದುಕೊAಡಿತ್ತು.

ದುಬಾರೆ ಸಾಕಾನೆ ಶಿಬಿರ ಮತ್ತು ಇಲ್ಲಿಯ ಸುತ್ತಮುತ್ತಲಿನ ಪ್ರದೇಶ ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಒಳನಾಡು ಜಲಸಾರಿಗೆ ಇಲಾಖೆ, ಕಾವೇರಿ ನೀರಾವರಿ ನಿಗಮ, ಪುರಾತತ್ವ ಇಲಾಖೆ ಹಾಗೂ ಸ್ಥಳೀಯ ನಂಜರಾಯಪಟ್ಟಣ ಗ್ರಾ.ಪಂ. ಜತೆ ಒಂದಿಲ್ಲೊAದು ಸಂಬAಧ ಹೊಂದಿರುವುದರಿAದ ಈ ಇಲಾಖೆಗಳ ಅಧಿಕಾರಿಗಳ ಮಧ್ಯೆ ಮೊದಲು ಸಮನ್ವಯತೆ ಮೂಡಬೇಕಿದೆ. ಕಾಮಗಾರಿ ಆರಂಭಿಸುವ ಮೊದಲು ಈ ಕೆಲಸ ಆಗದಿದ್ದರೆ ಮತ್ತೊಂದಿಷ್ಟು ಗೊಂದಲಗಳು ಮೂಡಬಹುದು ಎನ್ನುತ್ತಾರೆ ಸ್ಥಳಿಯರು.

ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣ ಕಾಮಗಾರಿ ಸಂಬAಧ ಪ್ರಕ್ರಿಯೆಗಳು ಇನ್ನೂ ಶುರುವಾಗದಿರುವುದಕ್ಕೆ ಶಾಸಕ ಡಾ. ಮಂತರ್ ಗೌಡ ಫೆ.11 (ಮಂಗಳವಾರ) ನಡೆದಿದ್ದ ಕುಶಾಲನಗರ ತಾಲೂಕು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಅನುದಾನ ಮಂಜೂರಾಗಿದ್ದರೂ ಕಾಮಗಾರಿ ಆರಂಭಿಸದಿರುವುದರ ಹಿಂದಿನ ಮರ್ಮ ಏನು ಎಂದು ಪ್ರಶ್ನಿಸಿದ್ದರು. ಅಧಿಕಾರಿಗಳ ಇಂಥ ನಡೆಯಿಂದ ಸರ್ಕಾರದ ಬಗ್ಗೆ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯ ಮೂಡುವಂತಾಗುತ್ತದೆ. ಜನಪ್ರತಿನಿಧಿಗಳು ಕೂಡ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಲು ಆಗುವುದಿಲ್ಲ. ಹಿಂದೊಮ್ಮೆ ಹೀಗೆ ಬಂದಿದ್ದ ಅನುದಾನ ಬಳಕೆಯಾಗದೆ ಮರಳಿದ್ದನ್ನೂ ಸೂಚ್ಯವಾಗಿ ತಿಳಿಸಿದ್ದಲ್ಲದೆ ಕೂಡಲೇ ಕೆಲಸ ಶುರು ಮಾಡಿ ಎಂದು ತಾಕೀತು ಮಾಡಿದ್ದರು.

ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ ತೂಗು ಸೇತುವೆ ತಜ್ಞೆ ಪತಂಜಲಿ ಭಾರದ್ವಾಜ್ ವಿನ್ಯಾಸವೊಂದನ್ನು ರೂಪಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪ್ರಸ್ತಾವಿತ ಸೇತುವೆಯ ಉದ್ದ 210 ಮೀ. ಅಗಲ 1.5 ಮೀ. ಇರಲಿದೆ. ಎರಡು ಕಂಬಗಳ ಅಧಾರದಲ್ಲಿ ನಿಲ್ಲಲಿರುವ ಈ ಸೇತುವೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರಲಿಲದೆ. ಹೆಚ್ಚು ಸ್ಥಿರತೆಗಾಗಿ ಸೇತುವೆಯ ಎರಡೂ ಬದಿಗಳಿಗಿಂತ ಮಧ್ಯದ ಭಾಗ ಎತ್ತರ ಇರುತ್ತದೆ. ಈ ಸೇತುವೆಗೆ ಸುಮಾರು 6 ಕೋಟಿ ರೂ. ವೆಚ್ಚದ ಅಂದಾಜು ಮಾಡಲಾಗಿದೆ.

ದುಬಾರೆ ತೂಗು ಸೇತುವೆಗೆ ಸರ್ಕಾರದಿಂದ ಹಣ ಬಂದಿದೆ. ಆದರೂ ಅಧಿಕಾರಿಗಳು ಕಾಮಗಾರಿ ಶುರು ಮಾಡಿಲ್ಲ. ಅನುದಾನ ಇದ್ದರೂ ಅಧಿಕಾರಿಗಳು ಈ ರೀತಿ ಯಾಕೆ ನಿರ್ಲಕ್ಷö್ಯ ತೋರಿಸುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ. ಮಾರ್ಚ್ ಒಳಗೆ ಕೆಲಸ ಆರಂಭಿಸದಿದ್ದರೆ ನಂತರ ಮಳೆಗಾಲ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಕಾಮಗಾರಿ ನಡೆಸಲು ಆಗುವುದಿಲ್ಲ. ವಿಷಯವನ್ನು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಗಮನಕ್ಕೆ ತರಲಾಗಿದೆ.

ವಿ.ಪಿ. ಶಶಿಧರ್, ಅಧ್ಯಕ್ಷ, ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ

ದುಬಾರೆಯಲ್ಲಿ ತೂಗು ಸೇತುವೆ ನಿರ್ಮಾಣಕ್ಕೆ 7.30 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಇಲ್ಲಿ ತೂಗು ಸೇತುವೆ ಬರುವುದರಿಂದ ಪ್ರವಾಸಿ ಆಕರ್ಷಣೆ ಹೆಚ್ಚಾಗಲಿದೆ. ದ್ವೀಪದ ಹಾಡಿಯಲ್ಲಿ ವಾಸಿಸುತ್ತಿರುವ ಗಿರಿಜನರಿಗೂ ಅನುಕೂಲ ಆಗಲಿದೆ. ಪೂರಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮಾರ್ಚ್ನಿಂದಲೇ ತೂಗುಸೇತುವೆ ಕಾಮಗಾರಿ ಆರಂಭಿಸುವAತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ಕೊಡಲಾಗಿದೆ.

ಡಾ. ಮಂತರ್ ಗೌಡ, ಮಡಿಕೇರಿ ಶಾಸಕ