ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹನೂರಿನಲ್ಲಿ ಪ್ರತಿಭಟನೆ ನಡೆಯಿತು. ನಂಜುಂಡ ವೌರ್ಯ, ಅಂಬರೀಶ್, ಸುಲೋಚನಾ, ಮಂಜುಳಾ, ಗೋವಿಂದ ಇತರರು ಇದ್ದರು.  
ಜಿಲ್ಲೆ

ಶೂ ಎಸೆದ ವಕೀಲನನ್ನು ಗಲ್ಲಿಗೇರಿಸಿ

ಹನೂರು: ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ  ಹನೂರಿನಲ್ಲಿ ಜಿಲ್ಲಾ ದಲಿತ ಸಂಘದ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಜಮಾಯಿಸಿದ ಪದಾಕಾರಿಗಳು, ಶೂ ಎಸೆದಿರುವ ವಕೀಲನ ವಿರುದ್ಧ ಘೋಷಣೆ ಕೂಗುತ್ತ ಅಲ್ಲಿಂದ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿ ತಲುಪಿದರು.

ಸಮಿತಿಯ ರಾಜ್ಯ ಸಂಚಾಲಕ ನಂಜುಂಡ ವೌರ್ಯ ಮಾತನಾಡಿ, ಭಾರತದ ಒಕ್ಕೂಟದ ವ್ಯವಸ್ಥೆಯಲ್ಲಿ ವಿವಿಧ ಜಾತಿ, ಧರ್ಮ ಹಾಗೂ ಸಂವಿಧಾನದ ಆಧಾರ ಮೇಲೆ ಪ್ರತಿಯೊಬ್ಬರೂ ಬದುಕುತ್ತಿದ್ದಾರೆ. ಆದ್ದರಿಂದ ಸಂವಿಧಾನವನ್ನು ಗೌರವಿಸುವುದು ಎಲ್ಲರ ಆದ್ಯ ಕರ್ತವ್ಯ. ಉನ್ನತ ಹುದ್ದೆ ಅಲಂಕರಿಸಿ ಗೌರವ ಸ್ಥಾನದಲ್ಲಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಮೇಲೆ ವಕೀಲ ಶೂ ಎಸೆದಿರುವ ನಿಜಕ್ಕೂ ಖಂಡನೀಯ. ಇದು ದೇಶ ಹಾಗೂ ಸಂವಿಧಾನಕ್ಕೆ ಮಾಡಿದ ಅಪಮಾನ. ಆದ್ದರಿಂದ ವಕೀಲನನ್ನು ಗಲ್ಲಿಗೇರಿಸಬೇಕು. ಜತೆಗೆ ಇಂತಹ ಘಟನೆಗಳು ಮರುಕಳುಹಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಬೇಕಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಶಿರಸ್ತೇದಾರ್ ನಾಗೇಂದ್ರ ಅವರ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಮಿತಿಯ ತಾಲೂಕು ಸಂಚಾಲಕ ಅಂಬರೀಶ್, ಮಂಡ್ಯ ಜಿಲ್ಲಾ ಸಂಚಾಲಕರಾದ ಸುಲೋಚನಾ, ಮಂಜುಳಾ, ಜಯದೇವ, ಮುಖಂಡರಾದ ಸರಿತಾ, ಸುಧಾ, ಮಾದೇವಿ, ಗೋವಿಂದ, ಹುಚ್ಚಯ್ಯ, ರಾಜು, ರಾಮು, ಮಾಣಿಕ್ಯ, ರಮೇಶ್, ವೇಲುಸ್ವಾಮಿ ಇತರರು ಇದ್ದರು.