ವಿಜಯವಾಣಿ ಸುದ್ದಿಜಾಲ ಪುತ್ತೂರು ಗ್ರಾಮಾಂತರ
ರಾಜ್ಯದಲ್ಲೇ ಪ್ರಥಮವಾಗಿ ಮುಸ್ಲಿಮರ ಪವಿತ್ರ ಕುರಾನ್‌ನ 30 ಕಾಂಡಗಳನ್ನು ಶಾಯಿಯಲ್ಲಿ ಅದ್ದುವ ಪೆನ್ ಮೂಲಕ ಕೈಯಲ್ಲೇ ಬರೆದು ಪುತ್ತೂರು ತಾಲೂಕಿನ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಕುರಾನ್‌ನ ಗತ ಇತಿಹಾಸದ ಮರುಸೃಷ್ಟಿ ಮಾಡಿರುವ ಅವರು, ಗ್ರಂಥಕ್ಕೆ ಬಣ್ಣದ ಪುಟಗಳ ಆಕರ್ಷಣೀಯ ರೂಪು ನೀಡಿದ್ದಾರೆ.
ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡಿರುವ ವಿದ್ಯಾರ್ಥಿನಿ, ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಬೈತಡ್ಕ ನಿವಾಸಿ ಇಸ್ಮಾಯಿಲ್ ಮತ್ತು ಝಹ್‌ರಾ ಜಾಸ್ಮಿನ್ ದಂಪತಿ ಪುತ್ರಿ ಸಜ್‌ಲಾ ಇಸ್ಮಾಯಿಲ್ ಸಾಧನೆ ಮಾಡಿದವರು.
ಮುಸ್ಲಿಮರ ಪವಿತ್ರ ಕುರಾನ್ ಪ್ರವಾದಿ ಕಾಲದಲ್ಲಿ ಅವತೀರ್ಣಗೊಂಡಿದ್ದು, ಆ ಸಂದರ್ಭ ಅದನ್ನು ಪಂಡಿತ ಶಿರೋಮಣಿಗಳು ಕೈಬರಹದ ಮೂಲಕ ಬರೆದು ಪರಸ್ಪರ ಹಂಚಿಕೊಳ್ಳುತ್ತಿದ್ದರಂತೆ. ಇದೀಗ ಸಜ್‌ಲಾ ಅವರು ಬಹಳಷ್ಟು ಏಕಾಗ್ರತೆಯೊಂದಿಗೆ 5 ವರ್ಷ ನಿರಂತರ ಪರಿಶ್ರಮ ವಹಿಸಿ ಕುರಾನ್‌ನ 30 ಕಾಂಡಗಳನ್ನು ಕೈಯಲ್ಲೇ ಸುಂದರವಾದ ಅಕ್ಷರಗಳೊಂದಿಗೆ ಪೋಣಿಸುವ ಮೂಲಕ ಗ್ರಂಥ ರಚಿಸಿದ್ದಾರೆ. ರಾಜ್ಯದಲ್ಲೇ ಪ್ರಥಮವಾಗಿ ಕುರಾನ್ ಅನ್ನು ಕೈಬರಹದಲ್ಲಿ ಬರೆದ ಸಾಧಕಿ ಎಂಬ ಪ್ರಶಂಸೆಗೆ ಭಾಜನರಾಗಿದ್ದಾರೆ.
ಒಂದು ಪುಟ ಬರೆಯಲು 4 ಗಂಟೆಗಳ ಅವಧಿ ಬೇಕಾಗುತ್ತಿತ್ತು. ಕೆಲವೊಂದು ದಿನಗಳಲ್ಲಿ 8 ಗಂಟೆ ಬಳಸಿಕೊಂಡು 2 ಪುಟಗಳನ್ನು ರಚನೆ ಮಾಡಿದ್ದೇನೆ. ಈ ಕಾರ್ಯವನ್ನು ಪೂರ್ಣಗೊಳಿಸಲು 302 ದಿನ, 2,416 ಗಂಟೆಗಳ ಬಳಕೆಯಾಗಿದೆ. ಏಕಾಗ್ರತೆ ವಹಿಸಿ ಬಹಳಷ್ಟು ಪರಿಶ್ರಮಪಟ್ಟ ಕಾರಣದಿಂದಾಗಿ ಈ ಕಾರ್ಯ ಸಾಧ್ಯವಾಗಿದೆ. ಸಜ್‌ಲಾ ಇಸ್ಮಾಯಿಲ್
ಪ್ರತಿ ಲೋಕಾರ್ಪಣೆ
ಸಜ್‌ಲ ಅವರ ಕುರ್‌ಆನ್ ಕೈಬರಹ ಪ್ರತಿಯ ಲೋಕಾರ್ಪಣೆ ಕಾರ್ಯಕ್ರಮ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ನಡೆಯಿತು. ಕೇರಳದ ಮರ್ಕಝ್ ನಾಲೇಜ್ ಸಿಟಿ ಮುದರ‌್ರಿಸ್ ಯಾಸೀನ್ ಸಖಾಫಿ ಅಲ್ ಅಝ್ಹರಿ ಅವರು ಕುರ್‌ಆನ್ ಪ್ರತಿ ಲೋಕಾರ್ಪಣೆಗೊಳಿಸಿದರು. ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅರಿಯಡ್ಕ ಅಬ್ದುಲ್ ರಹಿಮಾನ್, ಉಪಾಧ್ಯಕ್ಷ ಡಾ.ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ, ಕಾರ್ಯದರ್ಶಿ ಅಬ್ದುಲ್ ರಶೀದ್ ಸಂಪ್ಯ, ಶರಿಅತ್ ವಿಭಾಗ ಪ್ರಾಂಶುಪಾಲ ವಳವೂರು ಮುಹಮ್ಮದ್ ಸಅದಿ, ಉಪಪ್ರಾಂಶುಪಾಲ ಜಲೀಲ್ ಸಖಾಫಿ, ಪದವಿ ವಿಭಾಗದ ಪ್ರಾಂಶುಪಾಲ ಮಹಮ್ಮದ್ ಮನ್ಸೂರ್ ಕಡಬ, ಮರ್ಕಝುಲ್ ಹುದಾ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಫಾರೂಕ್ ಹಾಜಿ ಕನ್ಯಾನ, ಶರೀಅತ್ ವಿಭಾಗ ಮುಖ್ಯಸ್ಥ ಹನೀಫ್ ಸಖಾಫಿ ಕಡಬ, ಸಜ್‌ಲ, ಸಜ್‌ಲಾ ಅವರ ತಂದೆ ಇಸ್ಮಾಯಿಲ್ ಬೈತಡ್ಕ, ತಾಯಿ ಝಹ್‌ರಾ ಜಾಸ್ಮಿನ್ ಮತ್ತಿತರರಿದ್ದರು.