ತುಮಕೂರು: ಗುಬ್ಬಿ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಕೈಬರಹದ ದಾಖಲೆಗಳನ್ನು ತಿದ್ದಿ 450 ಎಕರೆ ಸರ್ಕಾರಿ ಭೂಮಿ ಗುಳುಂ ಮಾಡಿದ್ದ ಪ್ರಕರಣದ ತನಿಖೆ ತೀವ್ರಗೊಳಿಸಲಾಗಿದ್ದು, 7 ಜನರನ್ನು ಬಂಧಿಸಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಶಾಮೀಲಾಗಿರುವ ಜಿಲ್ಲೆಯ ಅತೀ ದೊಡ್ಡ ಭೂ ಹಗರಣದ ಬಗ್ಗೆ ಗುಬ್ಬಿ ತಹಸೀಲ್ದಾರ್ ಆರತಿ ನೀಡಿದ ದೂರಿನ ಹಿನ್ನೆಲೆಯಲ್ಲಿ 7 ಜನರನ್ನು ಬಂಧಿಸಿರುವ ಪೊಲೀಸರು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಅಭಿಲೇಖಾಲಯದ ವಿಷಯ ನಿರ್ವಾಹಕ ಜಿ.ಎಚ್.ಸತೀಶ್‌ಕುಮಾರ್ ಸೇರಿ ಹಾಗಲವಾಡಿ ಉಪತಹಸೀಲ್ದಾರ್ ಚೇತನ್, ರಾಜೇಶ್, ರಾಜು, ಕರಿಯಣ್ಣ ಜತೆ ಇನ್ನಿಬ್ಬರನ್ನು ವಶಕ್ಕೆ ಪಡೆಯಲಾಗಿದ್ದು ಪ್ರಕರಣದಲ್ಲಿ ಇನ್ನೂ ಸಾಕಷ್ಟು ಜನರು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಗುಬ್ಬಿ ಕಸಬಾ, ಹಾಗಲವಾಡಿ, ನಿಟ್ಟೂರು ಹಾಗೂ ಸಿ.ಎಸ್.ಪುರ ಹೋಬಳಿಯ ಸುಮಾರು 450 ಎಕರೆ ಸರ್ಕಾರಿ ಭೂಮಿಯ ಭೂದಾಖಲೆಗಳನ್ನು ತಿದ್ದಿ ಖಾಸಗಿ ವ್ಯಕ್ತಿಗಳ ಹೆಸರಿಗೆ ದಾಖಲೆಗಳನ್ನು ಸೃಷ್ಟಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢವಾಗಿದೆ.
ನಿಟ್ಟೂರು ಹೋಬಳಿ ದೊಡ್ಡಗುಣಿ ಮತ್ತು ಈಚಲಕಾವಲ್ ಗ್ರಾಮದ ಎಂಆರ್ ಕಡತ ಹಾಗೂ ಕೈಬರಹದ ಪಹಣಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಂದಾಯ ಇಲಾಖೆ ಸಿಬ್ಬಂದಿ ಅಸಹಕಾರದ ನಡುವೆಯೂ ತಹಸೀಲ್ದಾರ್ ಆರತಿ ಪ್ರಕರಣದ ಬಗ್ಗೆ ಕಳೆದೊಂದು ತಿಂಗಳಿನಿಂದ ತನಿಖೆ ನಡೆಸಿದ್ದು, ಎಲ್ಲ ನಾಡಕಚೇರಿಗಳಿಗೆ ಖುದ್ದು ಭೇಟಿ ನೀಡಿ ದಾಖಲೆಗಳನ್ನು ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ತಹಸೀಲ್ದಾರ್ ಮನೆಯಲ್ಲಿ ಕಳವಿಗೂ ನಂಟು: ತಹಸೀಲ್ದಾರ್ ಆರತಿ ವಸತಿಗೃಹದಲ್ಲಿ ಜೂ.25ರಂದು ನಡೆದಿದ್ದ ಕಳವು ಪ್ರಕರಣಕ್ಕೂ ಈಗ ಬಯಲಾಗಿರುವ ಸರ್ಕಾರಿ ಭೂಮಿ ಮಾರಾಟ ಹಗರಣಕ್ಕೂ ಸಂಬಂಧವಿರುವ ಶಂಕೆ ವ್ಯಕ್ತವಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಯೇ ಶಾಮೀಲಾಗಿ ಸರ್ಕಾರದ 450 ಎಕರೆ ಭೂಮಿಯನ್ನು 137 ಖಾಸಗಿ ವ್ಯಕ್ತಿಗಳಿಗೆ ದಾಖಲೆ ಮಾಡಿಕೊಟ್ಟ ಹಗರಣದ ಬಗ್ಗೆ ವಿಚಾರಣೆ ಆರಂಭಿಸಿದ್ದರಿಂದಲೇ ತಹಸೀಲ್ದಾರ್ ಮನೆಯ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ದಾಖಲೆಗಳು ಕಣ್ಮರೆಯಾಗಿರುವ ಬಗ್ಗೆಯೂ ತನಿಖೆ ನಡೆಸಬೇಕಿದೆ.
ಗುಬ್ಬಿಯಲ್ಲಿ ಸರ್ಕಾರ ಭೂಮಿ ಮಾರಾಟ ಮಾಡಿರುವ ಬಗ್ಗೆ ದೂರು ದಾಖಲಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ. ಉಪ್ಪು ತಿಂದವನೇ ನೀರು ಕುಡಿಯಬೇಕು.
ಆರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ