ಬೆಳ್ತಂಗಡಿ: ವಾತ್ಸಲ್ಯ ಯೋಜನೆಯಂತಹ ಸಮಾಜವನ್ನು ಕಟ್ಟುವ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಪುಣ್ಯದ ಕೆಲಸ. ಶ್ರೀಕ್ಷೇತ್ರದಿಂದ ಅದೆಷ್ಟೋ ಅಸಹಾಯಕರಿಗೆ ನೆರವನ್ನು ನೀಡುವ ಯೋಜನೆಗಳಿದ್ದು, ನಾವು ಇಂತಹ ಕಾರ್ಯಕ್ರಮಗಳಿಗೆ ಕೈ ಜೋಡಿಸಬೇಕು. ಕೈಲಾದವರು ಬಡವರಿಗೆ ಸಹಾಯ ಮಾಡುವುದು ಅಗತ್ಯ ಎಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೇಮಾವತಿ ವೀ. ಹೆಗ್ಗಡೆಯವರ ಕನಸಿನ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ, ಉಜಿರೆ ವಲಯದ ಮಾಚಾರು ಬಟ್ಟಾಜೆ ವಾತ್ಸಲ್ಯ ಸದಸ್ಯ ಕೂಸಪ್ಪ ಅವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಿ ಮಾತನಾಡಿದರು.
ಕೇಂದ್ರ ಒಕ್ಕೂಟ ಅಧ್ಯಕ್ಷ ಸೀತಾರಾಮ ಆರ್, ನಿವೃತ್ತ ಪ್ರಾದೇಶಿಕ ನಿರ್ದೇಶಕ ಸೀತಾರಾಮ್ ಶೆಟ್ಟಿ, ಜನಜಾಗೃತಿ ವೇದಿಕೆ ವಲಯಾಧ್ಯಕ್ಷರು ಪುಷ್ಪಾವತಿ ಶೆಟ್ಟಿ, ಗಣ್ಯರಾದ ರಾಮಚಂದ್ರ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮಯ್ಯ ಗೌಡ, ಉಜಿರೆ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಪ್ರಶಾಂತ್ ಜೈನ್, ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ತಾಲೂಕು ಯೋಜನಾಧಿಕಾರಿ ಸುರೇಂದ್ರ ಎ, ಉಮರಬ್ಬ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು, ಉಜಿರೆ ವಲಯದ ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಮಧುರಾ ವಸಂತ್ ಸ್ವಾಗತಿಸಿದರು. ವಲಯ ಮೇಲ್ವಿಚಾರಕಿ ವನಿತಾ ವಂದಿಸಿದರು.