ಉಡುಪಿ: ಶ್ರೀ ಪೇಜಾವರ ಮಠ ಹಾಗೂ ಆಸರೆ ಚಾರಿಟೇಬಲ್ ಟ್ರಸ್ಟ್ ಕಡಿಯಾಳಿ ಸಹಯೋಗದಲ್ಲಿ ದಾನಿಗಳ ಸಹಕಾರದೊಂದಿಗೆ ನಿರ್ಮಿಸಿದ ಎರಡು ಮನೆಗಳನ್ನು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಶುಕ್ರವಾರ ಫಲಾನುಭವಿಗಳಾದ ಮಾಲಾಶ್ರೀ ಭಟ್ ಮತ್ತು ಪ್ರತಿಮಾ ಪೂಜಾರ್ತಿ ಅವರಿಗೆ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು, ಈಗಾಗಲೇ ಶ್ರೀಮಠ , ಟ್ರಸ್ಟ್ ಗಳು ಹಾಗೂ ದಾನಿಗಳ ನೆರವಿನಿಂದ ಅನೇಕ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಈ ಮುಖೇನ ಸಮಾಜದ ಅನೇಕರಿಗೆ ಸೂರು ನಿರ್ಮಿಸಿಕೊಟ್ಟು ಅವರ ಬಾಳಿನಲ್ಲಿ ನೆಮ್ಮದಿ ತರಬಲ್ಲ ಸಾರ್ಥಕ ಪ್ರಯತ್ನಗಳಿಂದ ಅತೀವ ಸಂತಸವಾಗಿದೆ ಎಂದರು.
ಆಸರೆ ಟ್ರಸ್ಟ್ ಅಧ್ಯಕ್ಷ ಪಿ. ವಸಂತ ಭಟ್ , ಸದಸ್ಯರಾದ ಎಂ. ವಲ್ಲಭ ಭಟ್ ಟ್ರಸ್ಟ್ನ ಕಾರ್ಯಗಳ ಬಗ್ಗೆ ವಿವರಿಸಿದರು. ದಾನಿಗಳಾದ ಉದ್ಯಮಿ ರಾಜಗೋಪಾಲ ಆಚಾರ್ಯ ದಂಪತಿ ಹಾಗೂ ಇಂಜಿನಿಯರ್ ರಾಕೇಶ್ ಜೋಗಿಯವರನ್ನು ಶ್ರೀಗಳು ಸನ್ಮಾನಿಸಿದರು. ನಗರಸಭಾಸದಸ್ಯ ಗಿರೀಶ್ ಅಂಚನ್ , ಸಂತೋಷ್ ಕಿಣಿ , ರಾಮಚಂದ್ರ ಸನಿಲ್ ಉಪಸ್ಥಿತರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಹಾಗೂ ಸತೀಶ್ ಕುಲಾಲ್ ಕಾರ್ಯಕ್ರಮ ಸಂಯೋಜಿಸಿದರು .